ಅಂಬಲಪಾಡಿ: ಯಕ್ಷಗಾನ ಪ್ರಶಸ್ತಿ ಪ್ರಕಟ

ಪ್ರಭಾಕರ, ಸುಂದರ, ಹೆಬ್ಬಾರ್
ಉಡುಪಿ, ಫೆ.4: ಅಂಬಲಪಾಡಿ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾಮಂಡಳಿ ಯ 60ನೇ ವಾರ್ಷಿಕೋತ್ಸವ, ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನಗಳು ಫೆ.10 ಹಾಗೂ 11ರಂದು ಅಂಬಲಪಾಡಿಯ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸಂಸ್ಥೆಯ ಸ್ಥಾಪಕರ ಹೆಸರಿನಲ್ಲಿ ನೀಡುವ ಮೂರು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಗೆ ಮ.ನಾ. ಹೆಬ್ಬಾರ್ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಗೆ ಪ್ರಭಾಕರ ಆಚಾರ್ಯ ಹೆಮ್ಮಾಡಿ ಹಾಗೂ ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಗೆ ಸುಂದರ ಶೆಟ್ಟಿಗಾರ್ ಮಾರ್ಪಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ.
ಫೆ.11ರಂದು ಸಂಜೆ 6:30ಕ್ಕೆ ನಡೆಯುವ 60ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡುವರು. ಖ್ಯಾತ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆ ವಹಿಸುವರು.
ಫೆ.10ರಂದು ಸಂಜೆ 6:30ಕ್ಕೆ ನಿಡಂಬೂರುಬೀಡು ಅಣ್ಣಾಜಿ ಬಲ್ಲಾಳ ಸ್ಮರಣಾರ್ಥ ನಿಡಂಬೂರು ಬೀಡು ಬಲ್ಲಾಳ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕೋಟದ ಸಾಲಿಗ್ರಾಮ ಮಕ್ಕಳ ಮೇಳಕ್ಕೆ ಈ ಬಾರಿಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಅಲ್ಲದೇ ಬಾಲ ಕಲಾವಿದರಿಂದ ಹೂವಿನ ಕೋಲು, ಮಂಡಳಿಯ ಸದಸ್ಯರಿಂದ ಯಕ್ಷಗಾನವೂ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್, ಕಾರ್ಯದರ್ಶಿ ಕೆ.ಜೆ.ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







