ಅದಾನಿ ಸಂಸ್ಥೆಗೆ ಆರ್ಥಿಕ ನೆರವು ನೀಡಲು ಆಸ್ಟ್ರೇಲಿಯ ನಕಾರ
ಕಲ್ಲಿದ್ದಲು ಗಣಿ ಯೋಜನೆಗೆ ರೈಲು ಮಾರ್ಗ ಸಂಪರ್ಕ

ಮೆಲ್ಬೋರ್ನ್,ಫೆ.4: ಅದಾನಿ ಸಮೂಹಕ್ಕೆ ಭಾರೀ ಮುಖಭಂಗವೆನಿಸುವಂತಹ ಬೆಳವಣಿಗೆಯೊಂದರಲ್ಲಿ, ಭಾರತೀಯ ಮೂಲದ ಈ ಉದ್ಯಮದಿಗ್ಗಜ ಸಂಸ್ಥೆಗೆ 16.5 ಶತಕೋಟಿ ಡಾಲರ್ ವೆಚ್ಚದ ಕಾರ್‌ಮಿಕೆಲ್ ಕಲ್ಲಿದ್ದಲು ಗಣಿಗೆ ಬೇಕಾದ ರೈಲು ಮಾರ್ಗ ಸಂಪರ್ಕಕ್ಕೆ ತಾನು ಹಣಕಾಸು ನೆರವು ನೀಡುವುದಿಲ್ಲವೆಂದು ಆಸ್ಟ್ರೇಲಿಯ ಸರಕಾರ ರವಿವಾರ ತಿಳಿಸಿದೆ.
ತನ್ನ ಒಡೆತನದ ಕಾರ್‌ಮಿಕೆಲ್ ಕಲ್ಲಿದ್ದಲು ಗಣಿಯಿಂದ ಬಂದರಿಗೆ ರೈಲು ಮಾರ್ಗ ಸಂಪರ್ಕಿಸಲು ರಿಯಾಯಿತಿ ಬಡ್ಡಿದರದಲ್ಲಿ 900 ದಶಲಕ್ಷ ಡಾಲರ್ ಸಾಲ ನೀಡುವಂತೆ ಅದಾನಿ ಸಂಸ್ಥೆ ಆಸ್ಟ್ರೇಲಿಯ ಸರಕಾರವನ್ನು ಕೋರಿತ್ತು. ಆದರೆ ರವಿವಾರ ಆಸ್ಟ್ರೇಲಿಯದ ವೃತ್ತಿ ಶಿಕ್ಷಣ ಹಾಗೂ ಕೌಶಲ್ಯ ಇಲಾಖೆಯ ಸಹಾಯಕ ಸಚಿವೆ ಕರೆನ್ ಆ್ಯಂಡ್ರೂಸ್ ಹೇಳಿಕೆಯೊಂದನ್ನು ನೀಡಿ, ಅದಾನಿ ಸಂಸ್ಥೆಗೆ ಖಾಸಗಿ ಮೂಲಗಳಿಂದ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಲು ಸಾಧ್ಯವಾಗದೆ ಇದ್ದಲ್ಲಿ ಯೋಜನೆಯನ್ನು ಕೈಬಿಡುವ ಸಾಧ್ಯತೆಯಿದೆಯೆಂದು ಹೇಳಿದ್ದಾರೆ.
ಅದಾನಿ ಒಡೆತನದ ಗಣಿಗೆ ಬೇಕಾದ ಎಲ್ಲಾ ಅನುಮೋದನೆಗಳು ನೀಡಲಾಗಿತ್ತು. ಈಗ ಕೇವಲ ಹಣಕಾಸು ನೆರವಿಗೆ ಸಂಬಂಧಿಸಿದ ವಿಷಯವಷ್ಟೇ ಇತ್ಯರ್ಥವಾಗದೆ ಉಳಿದಿದೆಯೆಂದು ಆ್ಯಂಡ್ರೂಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ಆಸ್ಟ್ರೇಲಿಯ ಸುದ್ದಿವಾಹಿನಿ ವರದಿ ಮಾಡಿದೆ.
ಆದಾಗ್ಯೂ, ಅದಾನಿ ಒಡೆತನದ ಗಣಿ ಯೋಜನೆಯು ಉತ್ತರ ಆಸ್ಟ್ರೇಲಿಯದಲ್ಲಿ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಈ ಯೋಜನೆಯು ಮುಂದುವರಿಯುವುದನ್ನು ತಾನು ಬಯಸುವುದಾಗಿ ಆಕೆ ಹೇಳಿದ್ದಾರೆ.
ಅದಾನಿ ಗಣಿ ಯೋಜನೆಯ ವಿರುದ್ಧ ಪ್ರತಿಪಕ್ಷಗಳ ಪ್ರಬಲ ವಿರೋಧದ ಹೊರತಾಗಿಯೂ, ಆಡಳಿತಾರೂಢ ಲೇಬರ್ ಪಕ್ಷದ ನಾಯಕ ಯೋಜನೆಯನ್ನು ನಿಲುಗಡೆಗೊಳಿಸುವುದನ್ನು ವಿರೋಧಿಸಿದ್ದರು. ಆದರೆ ಉಪಚುನಾವಣೆಯಲ್ಲಿ ಪಕ್ಷದ ಪರಿಸರ ಕಾಳಜಿಯ ವಿಷಯವಾಗಿ ಮತದಾರರ ಮನಗೆಲ್ಲುವ ಉದ್ದೇಶದಿಂದ, ಗಣಿ ಯೋಜನೆಗೆ ನೀಡಲಾದ ಲೈಸೆನ್ಸ್‌ನ್ನು ರದ್ದುಪಡಿಸುವ ಬೆದರಿಕೆಯೊಡ್ಡಿದ್ದರು.
ಅದಾನಿ ಗಣಿ ಯೋಜನೆಗೆ ಸಾರ್ವಜನಿಕ ಸಬ್ಸಿಡಿ ಅಥವಾ ಸಾಲವನ್ನು ಒದಗಿಸುವ ಸಾಧ್ಯತೆಯನ್ನು ಈಗಾಗಲೇ ಆಸ್ಟ್ರೇಲಿಯದ ಕಾರ್ಮಿಕ ಸಚಿವಾಲಯ ತಳ್ಳಿಹಾಕಿದೆ. ಆಸ್ಟ್ರೇಲಿಯದಲ್ಲಿ ನೂರಾರು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿರುವ ಕಾರ್ಮಿಕೆಲ್ ಯೋಜನೆಯು ಆಸ್ಟ್ರೇಲಿಯದಲ್ಲಿ ನೂರಾರು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಆದರೆ ಪರಿಸರವಾದಿಗಳು ಹಾಗೂ ಮೂಲನಿವಾಸಿಗಳಿಂದ ಈ ಯೋಜನೆಗೆ ಬಲವಾದ ವಿರೋಧ ವ್ಯಕ್ತವಾಗಿದೆ.







