ಜನರ ಮದ್ಯೆ ಭಿನ್ನಾಭಿಪ್ರಾಯ ಮೂಡಿಸುವವರನ್ನು ಎಂದಿಗೂ ನಂಬಬೇಡಿ: ಎಸ್.ಎನ್.ಸುಬ್ಬಾರೆಡ್ಡಿ
ಮುಸ್ಲಿಂ ಭಾಂದವರ ಸಾಮೂಹಿಕ ವಿವಾಹ ಕಾರ್ಯಕ್ರಮ

ಬಾಗೇಪಲ್ಲಿ,ಫೆ.04: ಹಲವು ರಾಜಕೀಯ ಮುಖಂಡರು ಜನರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿ, ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವಂತೆ ಪ್ರೇರೆಪಿಸುತ್ತಿದ್ದಾರೆ. ಅಂತಹವರನ್ನ ಯಾರೂ ನಂಬಬೇಡಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ದರ್ಗಾದ ಬಳಿ ನಿರ್ಮಾಣ ಹಂತದಲ್ಲಿರುವ ಶಾದಿಮಹಲ್ ಆವರಣದಲ್ಲಿ ಮುಸ್ಲಿಂ ಭಾಂದವರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಹಲವು ರಾಜಕೀಯ ನಾಯಕರು ನಾನು ನಿಮ್ಮವನು, ಕ್ಷೇತ್ರವು ಅಭಿವೃದ್ದಿಯಾಗಿಲ್ಲ, ಅವರು ಆ ಪಕ್ಷದವರು, ಅವರು ಈ ಪಕ್ಷದವರು ಎಂದು ಜನರ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಇಂತಹ ವ್ಯಕ್ತಿಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗಿದೆ ಎಂದರು.
ನಾನು ಬಾಷಣ ಮಾಡುವ ಶಾಸಕನಲ್ಲ, ಕೆಲವರು ಭಾಷಣಕ್ಕೆಂದೇ ಸೀಮಿತವಾಗುತ್ತಿದ್ದಾರೆ. ಅವರು ಯಾವುದೇ ಕೆಲಸ ಮಾಡುವುದಿಲ್ಲ. ನಾನು ಕೆಲಸ ಮಾಡುವ ಶಾಸಕ. ನಿಮಗೆ ಭಾಷಣ ಮಾಡುವ ಶಾಸಕರು ಬೇಕೋ? ಕೆಲಸ ಮಾಡುವ ಶಾಸಕರು ಬೇಕೋ ನೀವೇ ತೀರ್ಮಾನಿಸಿ ಎಂದ ಅವರು, ನನಗೆ ಯಾವುದೇ ಜಾತಿ ಮತ ಬೇದ ಭಾವವಿಲ್ಲ. ಇಲ್ಲರೂ ಒಂದಾಗಿರಬೇಕೆಂಬುವುದೇ ನನ್ನ ಆಸೆ ಎಂದರು.
ಈ ಉಚಿತ ಸಾಮೂಹಿಕ ವಿವಾಹ ಸಂಭ್ರಮದಲ್ಲಿ ಮದುವೆ ಆಗಿರುವ ಜೋಡಿಗಳಿಗೆ ಶಾದಿ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರದಿಂದ ಪ್ರೋತ್ಸಾಹ ಹಣವನ್ನು ಮಂಜೂರು ಮಾಡಿಸುತ್ತೇನೆ. ಹಾಗೂ ಅವರ ಜೀವನ ನಿರ್ವಾಹಣೆಗೆ 50 ಸಾವಿರ ರೂ.ಗಳ ಸಾಲವನ್ನು ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂದ್ರ ಮಾತನಾಡಿ, ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಐಕ್ಯತಾ ಮನೋಭಾವದಿಂದ ಬಾಳುತ್ತಿದ್ದಾರೆ. ಆದರೆ ಕೋಮುವಾದಿಗಳಾದ ಬಿಜೆಪಿಯವರು, ಹಿಂದೂ ಮತ್ತು ಮಮರ ನಡುವೆ ಬೆಂಕಿ ಇಡುತ್ತಿದ್ದಾರೆ. ಈ ಕ್ಷೇತ್ರದ ಮತದಾರರು ಕೋಮುವಾದಿಗಳನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಜೆಡಿಎಸ್ ಪಕ್ಷದವರು ಅಧಿಕಾರಕ್ಕಾಗಿ ಕೋಮುವಾದಿ ಬಿಜೆಪಿಯವರ ಜೊತೆ ಅಧಿಕಾರ ಹಂಚಿಕೊಂಡವರು, ಇಂದು ಅವರಿಗೆ ಬಿಜೆಪಿ ವಿರುದ್ದ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.
ಇದೇ ವೇಳೆ ಮುಸ್ಲಿಂ ಸಮುದಾಯದ 10 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ಪುರಸಭೆ ಅಧ್ಯಕ್ಷೆ ಮಮತಾನಾಗರಾಜರೆಡ್ಡಿ, ಉಪಾಧ್ಯಕ್ಷೆ ಹುಸೇನ್ ಭೀ, ಪುರಸಭೆ ಸದಸ್ಯರಾದ ಆ.ನಾಮೂರ್ತಿ, ಮಧುಸೂಧನರೆಡ್ಡಿ, ತಾ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಬಿ,ವಿ.ಮಂಜುನಾಥ್, ತಾ.ಪಂ ಮಾಜಿ ಅಧ್ಯಕ್ಷ ಅಶ್ವಥಪ್ಪ, ಮುಖಂಡರಾದ ನಾಗರಾಜ್, ಮುನೀರ್ ಅಹಮ್ಮದ್, ಗುಲ್‍ನಾಜ್ ಬೇಗಂ, ಇನಾಯಿತುಲ್ಲಾ, ನಿಸಾರ್ ಅಹಮ್ಮದ್, ಕಲೀಮುಲ್ಲಾ, ರಿಝ್ವಾನ್, ಅಮಾನುಲ್ಲಾ, ಭಾಷಾಸಾಬ್, ಜಭೀವುಲ್ಲಾ, ನಾಗರಾಜ್‍ರೆಡ್ಡಿ ಮತ್ತಿರರು ಹಾಜರಿದ್ದರು.







