ಅಂತರಂಗ ಶುದ್ಧಿಯಾಗದೆ ದೇವಾಸ್ಥಾನ ಕಟ್ಟಿ ಪ್ರಯೋಜನವಿಲ್ಲ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ನಾಗಮಂಗಲ, ಫೆ.2: ಮನುಷ್ಯನ ಅಂತರಂಗ ಶುದ್ಧಿಯಾಗದ ಹೊರತು ಎಷ್ಟೇ ದೇವಾಲಯ ಕಟ್ಟಿದರೂ, ದೇವಾಲಯಗಳ ದೇವರ ದರ್ಶನ ಪಡೆದರೂ ಪ್ರಯೋಜನವಾಗದು ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೆಳ್ಳೂರು ಹೋಬಳಿ, ಹೊನ್ನೇನಹಳ್ಳಿ ಗ್ರಾಮದ ದೇವತೆ ಉಡಸಲಮ್ಮದೇವಿಯ ನೂತನ ದೇವಾಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ನಮ್ಮ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಕೆಳಗೆ ಕೆದಕು ಮೇಲ್ಗಡೆ ಹುಡುಕು ಎಂಬ ನಾಣ್ಣುಡಿಯಂತೆ ಕಾಯಕದಲ್ಲಿ ಪರಿಶುದ್ದ ಆಗದ ಹೊರತು ಯಾವುದೇ ಪ್ರತಿಫಲ ದೊರೆಯದು ಎಂದು ಅವರು ಹೇಳಿದರು.
ಶಾಸಕ ಎನ್.ಚೆಲುವರಾಯಸ್ವಾಮಿ ಮಾತನಾಡಿ, ನಮ್ಮ ದಿನನಿತ್ಯದ ಬದುಕಿನ ಜಂಜಾಟದ ಒತ್ತಡದ ಜೀವನದಲ್ಲಿ ನೆಮ್ಮದಿ ಕಾಣಬೇಕಾದರೆ ದೇವಾಲಯಗಳ ದರ್ಶನ ಅವಶ್ಯಕ ಎಂದರು.
ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಮೈಸೂರಿನ ರಾಜವಂಶಸ್ಥ ಯಧವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತುರುವೇಕೆರೆಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಸುರೇಶ್‍ಗೌಡ, ಜಿಪಂ ಸದಸ್ಯ ಮುತ್ತಣ್ಣ, ತಾಪಂ ಸದಸ್ಯ ಸತ್ಯಣ್ಣ ಹಾಗೂ ಇತರರು ಉಪಸ್ಥಿತರಿದ್ದರು.







