ಅಮೆರಿಕದ ಅಣು ನೀತಿಯಿಂದ ಮಾನವಕುಲ ವಿನಾಶದಂಚಿಗೆ: ಇರಾನ್ ಆಕ್ರೋಶ

ಟೆಹರಾನ್,ಫೆ.4: ಅಮೆರಿಕದ ನೂತನ ಪರಮಾಣು ನೀತಿಯು, ಮಾನವಕುಲವನ್ನು ಸರ್ವನಾಶದ ಅಂಚಿನೆಡೆಗೆ ಕೊಂಡೊಯ್ಯುತ್ತಿದೆಯೆಂದು ಇರಾನ್ ವಿದೇಶಾಂಗ ಸಚಿವ ಮುಹಮ್ಮದ್ ಜಾವದ್ ಝರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಅಣ್ವಸ್ತ್ರ ಬತ್ತಳಿಕೆಯನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಅಮೆರಿಕದ ರಕ್ಷಣಾ ಕಾರ್ಯಾಲಯ ಪೆಂಟಗಾನ್ ಬಹಿರಂಗಪಡಿಸಿದ ಮರುದಿನವೇ ಇರಾನ್ ವಿದೇಶಾಂಗ ಸಚಿವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕದ ನೂತನ ಅಣ್ವಸ್ತ್ರ ನೀತಿಯು, ಅಂತಾರಾಷ್ಟ್ರೀಯ ಪ್ರಸರಣ ತಡೆ ಒಡಂಬಡಿಕೆಯ ಉಲ್ಲಂಘನೆಯಾಗಿದೆಯೆಂದು ಝಾರೀಫ್ ತಿಳಿಸಿದ್ದಾರೆ.
ತನ್ನ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಅಮೆರಿಕ ಹೊಂದಿರುವ ಗಾಢನಂಬಿಕೆಯ ಕಾರಣದಿಂದಾಗಿಯೇ ಅದು, 2015ರಲ್ಲಿ ಏರ್ಪಟ್ಟ ಇರಾನ್ ಅಣ್ವಸ್ತ್ರ ಒಪ್ಪಂದವನ್ನು ಕಡೆಗಣಿಸಿದೆಯೆಂದರು.
ವಿಶೇಷವಾಗಿ ರಶ್ಯದಿಂದ ಎದುರಾಗಿರುವ ಬೆದರಿಕೆಗೆ ತಡೆಯೊಡ್ಡಲು ಕಡಿಮೆ ತೀವ್ರತೆಯ ಅಣ್ವಸ್ತ್ರಗಳ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಪೆಂಟಗಾನ್ ಪ್ರಕಟಿಸಿದ ಅಣ್ವಸ್ತ್ರ ಸನ್ನದ್ಧತೆ ಕುರಿತ ನೂತನ ವರದಿಯೊಂದು ಪ್ರತಿಪಾದಿಸಿತ್ತು.
1970ರಲ್ಲಿ ಜಾರಿಗೆ ಬಂದಿರುವ ಅಣ್ವಸ್ತ್ರ ಪ್ರಸರಣೆ ತಡೆ ಒಡಂಬಡಿಕೆಗೆ ಅಮೆರಿಕ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳು ಸಹಿಹಾಕಿವೆ. ಅಣ್ವಸ್ತ್ರ ಪೈಪೋಟಿಗೆ ಸಾಧ್ಯವಿದ್ದಷ್ಟು ಬೇಗನೆ ಅಂತ್ಯ ಹಾಡುವುದು ಹಾಗೂ ಪರಮಾಣು ನಿಶಸ್ತ್ರೀಕರಣಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಒಪ್ಪಂದವು ವಿಶ್ವಸಮುದಾಯಕ್ಕೆ ಕರೆ ನೀಡಿತ್ತು.







