ಮದ್ದೂರು: ಅಗಲಿದ ರೈತ ನಾಯಕ ನರಸರಾಜುಗೆ ಹಸಿರು ನಮನ
ಕಾಯಕ ಪ್ರಶಸ್ತಿ ಪ್ರದಾನ, ಗಿಡಗಳ ವಿತರಣೆ

ಮದ್ದೂರು, ಫೆ.4: ತಾಲೂಕಿನ ಕೋಣಸಾಲೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈತಸಂಘದ ನಾಯಕ ಕೋಣಸಾಲೆ ನರಸರಾಜು ಅವರಿಗೆ ರವಿವಾರ ಹಸಿರು ನಮನ ಸಲ್ಲಿಸಿ ಕಾಯಕ ಪ್ರಶಸ್ತಿ ಪ್ರದಾನ ಹಾಗೂ ಗಿಡಗಳ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಹಾಗೂ ರೈತಸಂಘದ ವರಿಷ್ಠ ಮಾತನಾಡಿ, ರೈತ, ದಲಿತಹಾಗೂ ಶ್ರಮಿಕ ವರ್ಗಗಳ ಧ್ವನಿಯಾಗಿದ್ದ ಕೋಣಸಾಲೆ ನರಸರಾಜು ಅವರು, ನೆಲ, ಜಲ, ನಾಡು, ನುಡಿಗಾಗಿ ಶ್ರಮಿಸಿದರು ಎಂದು ಸ್ಮರಿಸಿದರು.
ಸರಳ ವಿವಾಹಗಳ ಜಾರಿ, ಮೌಢ್ಯ, ಕಂದಾಚಾರಗಳ ಬಗ್ಗೆ ಜಾಗೃತಿ, ಶೈಕ್ಷಣಿಕ, ಸಹಕಾರಿ ಕ್ಷೇತ್ರಗಳ ಬಲವರ್ಧನೆಗೆ ಮುಂದಾಗಿದ್ದರು. ರೈತ, ದಲಿತ ಒಳಗೊಂಡಂತೆ ಪ್ರಗತಿಪರ ಚಳವಳಿಗಳ ಮೂಲಕ ಸಹಸ್ರಾರು ಕುಟುಂಬಗಳ ನೆಮ್ಮದಿಗೆ ಹೋರಾಡಿದರು ಎಂದು ಅವರು ಹೇಳಿದರು.
ರೈತ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ನಂದಿನಿ ಜಯರಾಂ ಮಾತನಾಡಿ, ಕೋಣಸಾಲೆ ನರಸರಾಜು ಅವರ ಸಾವಿನಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಈ ಮೂಲಕ ಸಂಘದ ಗಟ್ಟಿಧ್ವನಿಯೊಂದನ್ನು ನಾವು ಕಳೆದುಕೊಂಡಿದ್ದೇವೆ ಎಂದರು.
ಚಿಕ್ಕವರನ್ನೂ ತುಂಬಾ ಪ್ರೀತಿಯಿಂದ ಹಾಗೂ ಗೌರವದಿಂದ ಮಾತನಾಡಿಸುತ್ತಿದ್ದ ನರಸರಾಜು ಅವರದು ಉತ್ತಮ ವ್ಯಕ್ತಿತ್ವ. ಯಾರನ್ನೂ ದ್ವೇಷ ಮಾಡದೆ, ನಿಸ್ವಾರ್ಥದಿಂದ ಸೇವೆ ಮಾಡುವ ಮೂಲಕ ಅಜಾತ ಶತ್ರುವಾಗಿದ್ದರು ಎಂದು ಅವರು ತಿಳಿಸಿದರು.
ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಡಗಲರಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಮಹಿಳಾ ಜಿಲ್ಲಾಧ್ಯಕ್ಷೆ ಯಧುಶೈಲ ಸಂಪತ್, ಗೌರವಾಧ್ಯಕ್ಷ ಎಂ.ರಾಜೇಗೌಡ, ಜಿಲ್ಲಾಧ್ಯಕ್ಷ ಶುಂಭೂನಹಳ್ಳಿ ಸುರೇಶ್, ತಾಲೂಕು ಅಧ್ಯಕ್ಷ ಜಿ.ಎ.ಶಂಕರ್, ಜಿಪಂ ಸದಸ್ಯ ಮರಿಹೆಗ್ಗಡೆ, ರಾಮಕೃಷ್ಣಯ್ಯ, ಲಿಂಗಪ್ಪಾಜಿ, ವರದರಾಜು, ಕುಮಾರ್‍ಕೊಪ್ಪ, ಪ್ರಿಯಾಂಕ ಅಪ್ಪು ಪಿ.ಗೌಡ, ಗೊಲ್ಲರದೊಡ್ಡಿ ಅಶೋಕ್, ರೇವಣ್ಣ, ಪಣ್ಣೆದೊಡ್ಡಿ ರಮೇಶ್, ಕೀಳಘಟ್ಟ ನಂಜುಂಡಯ್ಯ, ಕುಂಟನಹಳ್ಳಿ ದೊಡ್ಡೋನು, ಮರಿಲಿಂಗ, ಇತರ ಗಣ್ಯರು ಪಾಲ್ಗೊಂಡಿದ್ದರು.







