ಮಹಾದಾಯಿ ವಿವಾದ : ಮೋದಿ ಮೌನದ ವಿರುದ್ಧ ಆಕ್ರೋಶ
ಬೆಂಗಳೂರು, ಫೆ.4: ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಪ್ರಸ್ತಾಪ ಮಾಡದೆ, ಮೌನವಾಗಿರುವುದಕ್ಕೆ ರೈತರು, ಕನ್ನಡಪರ ಹೋರಾಟಗಾರರು ಭಾರೀ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಮಹಾದಾಯಿ-ಕಳಸಾಬಂಡೂರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಆಗ್ರಹಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ಜನ ಸಾಮಾನ್ಯರ ಪಕ್ಷದ ನೇತೃತ್ವದಲ್ಲಿ ಸತತ ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ರೈತರು, ಪ್ರಧಾನಿ ಮೋದಿ ಮೌನವಾಗಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಅರಮನೆ ಮೈದಾನದಲ್ಲಿ ಬಿಜೆಪಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪೂರ್ಣ ಭಾಷಣ ಕೇಳಿದ ಹೋರಾಟಗಾರರು, ಅವರ ಭಾಷಣದಲ್ಲಿ ಎಲ್ಲಿಯೂ ತಮ್ಮ ಬೇಡಿಕೆಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನರೇಂದ್ರ ಮೋದಿ ಅವರ ‘ಅಣಕು ಶವಯಾತ್ರೆ’ ನಡೆಸಿದರು.
ಮೋದಿ ಮೌನಿ ಬಾಬಾ:
ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ(ಚಂಪಾ), ಮಹಾದಾಯಿ- ಕಳಸಾಬಂಡೂರಿ ಹೋರಾಟದ ಬಗ್ಗೆ ಪ್ರಧಾನಿ ಮಾತನಾಡಬೇಕು.ಅವರು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೂ, ಈ ಬಗ್ಗೆ ಮಾತನಾಡುವ ನಿರೀಕ್ಷೆಯನ್ನು ಹೊಂದಿದ್ದೇವೆ. ಆದರೆ, ಅವರು ‘ಮೌನಿ ಬಾಬಾ’ ಆಗಿದ್ದಾರೆ ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ಹೋರಾಟದ ಬಗ್ಗೆ ಮೌನವಾಗಿರುವುದು ಅತ್ಯಂತ ನೋವಿನ ಸಂಗತಿ. ಕನ್ನಡಿಗರನ್ನು ಅವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದ ನೆಲದಲ್ಲಿ ಮೋದಿ ಬಂದು ಭಾಷಣ ಮಾಡಿ ಹೋಗಿದ್ದಾರೆ. ಇದೇ ರೀತಿ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಕಡೆಗಣಿಸಿದ್ದರೆ, ಪರಿಸ್ಥಿತಿ ಬೇರೆಯೇ ರೀತಿ ಇರುತ್ತಿತ್ತು.ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ವಾಟಾಳ್ ಹೇಳಿದರು.