ಜಾತ್ರೆಗೆ ದನಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ: ಓರ್ವ ವ್ಯಕ್ತಿ, 11 ಹಸುಗಳು ಸಜೀವ ದಹನ

ತುಮಕೂರು,ಫೆ.04: ಸಿದ್ದಗಂಗಾ ಮಠದ ದನಗಳ ಜಾತ್ರೆಗೆ ಹಸುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಗೆ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಜೊತೆಗೆ ವಾಹನದಲ್ಲಿದ್ದ 11 ಹಸುಗಳು ಸಾವನ್ನಪ್ಪಿ, 2 ಹಸುಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಸಿದ್ದಗಂಗಾ ಮಠದ ಸಮೀಪದ ಮಾರನಾಯಕನ ಪಾಳ್ಯ ಬಳಿ ನಡೆದಿದೆ.
ತುಮಕೂರಿನ ಐತಿಹಾಸಿಕ ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗೇಶ್ವರ ಜಾತ್ರೆ ಫೆಬ್ರವರಿ 05 ರಿಂದ 19ರವರೆಗೆ ಸಿದ್ದಗಂಗಾ ಮಠದ ಆವರಣದಲ್ಲಿ ನಿಗದಿಯಾಗಿತ್ತು. ಇದರ ಅಂಗವಾಗಿ ಪ್ರತಿ ವರ್ಷ ದನಗಳ ಜಾತ್ರೆ ನಡೆಯುತ್ತದೆ. ದೂರದ ಮಹಾರಾಷ್ಟ್ರದಿಂದಲೂ ದನಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ಜನರು ಬರುತ್ತಾರೆ.
ಈ ಐತಿಹಾಸಿಕ ಜಾತ್ರೆಗೆ ದನಗಳನ್ನು ಮಾರಾಟ ಮಾಡಲು ಕೊರಟಗೆರೆ ತಾಲೂಕು ಬೊಮ್ಮಲದೇವಿಪುರದ ತಿಗಳರ ಪಾಳ್ಯದಿಂದ 14 ಎತ್ತುಗಳನ್ನು ವಾಹನಕ್ಕೆ ತುಂಬಿಕೊಂಡು, ವಾಹನದ ಮೇಲ್ಬಾಗದಲ್ಲಿ ದನಗಳಿಗೆ ಬೇಕಾದ ಮೇವು ತುಂಬಿಸಿ ದೇವರಾಯನದುರ್ಗ ಮತ್ತು ಸಿದ್ದಗಂಗಾ ಮಠದ ರಸ್ತೆಯಲ್ಲಿ ಬರುತ್ತಿತ್ತು. ರಸ್ತೆಯಲ್ಲಿ ಹರಿದು ನೇತಾಡುತಿದ್ದ ವಿದ್ಯುತ್ ತಂತಿ ಲಾರಿಗೆ ತಗುಲಿ ದಿಢೀರನೇ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ದನಗಳ ಜೊತೆ ಲಾರಿಯಲ್ಲಿದ್ದ ಗಂಗರಾಜು ಮತ್ತು 11 ಹಸುಗಳು ಜೀವಂತವಾಗಿ ದಹನಗೊಂಡು, ಮತ್ತೊರ್ವ ರೈತ ಗಂಗಯ್ಯ ಹಾಗೂ ಎರಡು ಹಸುಗಳು ತೀವ್ರವಾಗಿ ಗಾಯಗೊಂಡಿವೆ. ಗಾಯಾಳುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ವಾಹನದ ಮೇಲೆ ಒಣ ಹುಲ್ಲು ಇರಿಸಿದ್ದೇ ಬೆಂಕಿ ಹತ್ತಿಕೊಳ್ಳಲು ಕಾರಣ ಎನ್ನಲಾಗಿದೆ.







