“ಪತಿಯ ಹಿಂಸೆಯಿಂದ ನನ್ನನ್ನು ರಕ್ಷಿಸಿ” : ವೀಡಿಯೋ ಮೂಲಕ ಪೊಲೀಸ್ ಮೊರೆ ಹೋದ ಮುಂಬೈ ಮಹಿಳೆ
ಮುಂಬೈ,ಫೆ.5 : ಆಟೊಮೊಬೈಲ್ ಉದ್ಯಮಿಯಾಗಿರುವ ಪತಿಯ ಹಿಂಸೆಯಿಂದ ತನಗೆ ರಕ್ಷಣೆ ನೀಡುವಂತೆ ಮಹಿಳೆಯೊಬ್ಬರು ಮೊರೆಯಿಡುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದೆ. ಈ ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರು ತಿಳಿಸಿದ್ದಾರೆ.
ಚಿತ್ರ ತಯಾರಕ ಅಶೋಕೆ ಪಂಡಿತ್ ಎಂಬವರು ಪೋಸ್ಟ್ ಮಾಡಿರುವ ಈ ವೀಡಿಯೋದಲ್ಲಿ ಖಾರ್ ನಿವಾಸಿಯಾಗಿರುವ ಮಹಿಳೆ ಅಳುತ್ತಾ ಸಹಾಯ ಮತ್ತು ನ್ಯಾಯಕ್ಕಾಗಿ ಬೇಡುತ್ತಿದ್ದಾರೆ.
"ನನ್ನನ್ನು ನನ್ನ ಪತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಳೆದ ಹಲವಾರು ವರ್ಷಗಳಿಂದ ಹಿಂಸಿಸುತ್ತಿದ್ದಾರೆ. ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾತ್ರ ನಾನು ಈ ಸಂಬಂಧ ಮುಂದುವರಿಸುತ್ತಿದ್ದೇನೆ. ಆದರೆ ಈ ಮನುಷ್ಯ ನನ್ನನ್ನು ಬದುಕಲು ಬಿಡುತ್ತಿಲ್ಲ,'' ಎಂದು ಮಹಿಳೆ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಎಫ್ಐಆರ್ ದಾಖಲಿಸಿರುವ ಹೊರತಾಗಿಯೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಆಕೆ ಹೇಳಿದ್ದಾರೆ. ``ನನಗೆ ಸಹಾಯ ಮಾಡಿ. ಇಲ್ಲದಿದ್ದರೆ ಈ ಮನುಷ್ಯ ನನ್ನನ್ನು ಕೊಂದೇ ಬಿಡಬಹುದು. ಸಹಾಯ ದೊರೆಯದೇ ಇದ್ದಲ್ಲಿ ನಾಳೆ ನಾನು ರಸ್ತೆಯಲ್ಲಿರಬಹುದು. ನನಗೆ ನ್ಯಾಯ ಕೊಡಿ,'' ಎಂದು ಮಹಿಳೆ ಮನವಿ ಮಾಡಿದ್ದಾರೆ.
"ಮಹಿಳೆ ಇತ್ತೀಚೆಗಷ್ಟೇ ತನ್ನ ಪತಿಯ ವಿರುದ್ಧ ಎರಡು ಪ್ರಕರಣ ದಾಖಲಿಸಿದ್ದಾರೆ'' ಎಂದು ಪೊಲೀಸರು ಹೇಳಿದ್ದಾರೆ. ಒಂದು ಪ್ರಕರಣ ಅಕ್ರಮವಾಗಿ ಮನೆ ಪ್ರವೇಶಿಸಿದ್ದಕ್ಕಾಗಿ ಹಾಗೂ ಇನ್ನೊಂದು ಪ್ರಕರಣ ಬೆದರಿಕೆ ಹಾಕಿದ್ದಕ್ಕಾಗಿ ದಾಖಲಿಸಲಾಗಿದೆ. ಆಕೆಗೆ ಮೂವರು ಮಕ್ಕಳಿದ್ದು, ಪತಿ ಮತ್ತು ಇಬ್ಬರು ಮಕ್ಕಳು 11ನೇ ಮಹಡಿಯ ಮನೆಯಲ್ಲಿದ್ದರೆ, ಆಕೆ ತನ್ನ ಪುತ್ರಿಯೊಂದಿಗೆ 12ನೇ ಮಹಡಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ.
Cry of a women goes unheard with #KharPoliceStation. @MumbaiPolice @CPMumbaiPolice. Please do the needful immediately before something untoward happens. #BetibachaoBetiPadao. pic.twitter.com/9DK5Bn1nJz
— Ashoke Pandit (@ashokepandit) February 4, 2018