ಅನ್ನಭಾಗ್ಯ ಟೀಕೆ ಮಾಡಿದ್ದ ಬಿಜೆಪಿಯಿಂದ ಇದೀಗ ಲಾಭ ಪಡೆಯುವ ಪ್ರಯತ್ನ: ಲೋಕೇಶ್ವರಿ ವಿನಯಚಂದ್ರ ಆರೋಪ
ಪುತ್ತೂರು, ಫೆ. 5: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ ವೇಳೆ ಸಾಕಷ್ಟು ಟೀಕೆಗಳನ್ನು ಮಾಡಿದ್ದ ಬಿಜೆಪಿಗರು ಇದೀಗ ದೇಶದಲ್ಲೇ ಜನಪ್ರಿಯ ಯೋಜನೆ ಎಂಬುದು ಗೊತ್ತಾಗಿ ಇದು ಕೇಂದ್ರ ಸರ್ಕಾರದ ಯೋಜನೆ ಎಂದು ಬಿಂಬಿಸುವ ಮೂಲಕ ಅದರ ಲಾಭ ಪಡೆಯುಲು ಪ್ರಯತ್ನಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಲೋಕೇಶ್ವರಿ ವಿನಯಚಂದ್ರ ಅವರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದಾಗ ಉಚಿತವಾಗಿ ಅಕ್ಕಿ ಕೊಟ್ಟರೆ ಜನ ಸೋಮಾರಿಗಳಾಗುತ್ತಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆಗ ಅವರು ಇದು ಕೇಂದ್ರ ಸರ್ಕಾರ ದುಡ್ಡಲ್ಲಿ ನಡೆಯುವ ಯೋಜನೆ ಎಂದು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಈಗ ಪ್ರಚಾರಗಿಟ್ಟಿಸಿಕೊಳ್ಳುವ ಕೆಲಸಕ್ಕೆ ಇಳಿದಿದ್ದಾರೆ ಎಂದರು. ದೇಶದ ಸುಮಾರು 18 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ಒಂದೇ ಒಂದು ರಾಜ್ಯದಲ್ಲಿ ಉಚಿತ ಅಕ್ಕಿ ನೀಡುವ ಯೋಜನೆ ಇಲ್ಲ. ಕೇಂದ್ರದ ಯೋಜನೆ ಆಗಿದ್ದರೆ ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಇರಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಯೋಜನೆಗಳ ಸರ್ಕಾರ. ನಾಲ್ಕೂವರೆ ವರ್ಷದಲ್ಲಿ 5 ಕೋಟಿ ಜನರಿಗೆ ನಮ್ಮ ಸರ್ಕಾರ ನೆರವಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಸಾಲ ಮನ್ನಾ, ಸೌರಭಾಗ್ಯ, ಗಂಗಾಕಲ್ಯಾಣ, ಮನಸ್ವಿನಿ, ನಿರ್ಮಲ ಭಾಗ್ಯ, ನಮ್ಮ ಮೆಟ್ರೋ ಹೀಗೆ ಸಾಲು ಸಾಲು ಅಭಿವೃದ್ಧಿ ಕಾರ್ಯಗಳಾಗಿವೆ. ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳ ಪೈಕಿ 158ನ್ನೂ ಈಡೇರಿಸಲಾಗಿ ಎಂದರು.
ಕೇಂದ್ರ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಯಿತ್ತು. ಕೃಷಿಕರಿಗೆ ಒತ್ತು ನೀಡಿ ರಾಜ್ಯ ಸರ್ಕಾರ ಮಾಡಿದಂತೆ ರೈತರ ಸಾಲ ಮನ್ನಾ ಮಾಡಬಹುದೆಂಬ ನಿರೀಕ್ಷೆ ಯಿತ್ತು. ಆದರೆ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ ಎಂದರು.
ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಅವರು ರಾಜ್ಯಮಟ್ಟದ ವರ್ಚಸ್ಸು ಹೊಂದಿರುವ ನಾಯಕಿ ಮತ್ತು ಯಶಸ್ವೀ ಶಾಸಕಿ. ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಅವರೇ ನೂರಕ್ಕೆ ನೂರು ಪುತ್ತೂರು ಕ್ಷೇತ್ರದ ಅಭ್ಯರ್ಥಿ. ಇದರಲ್ಲಿ ಯಾವುದೇ ಸಂಶಯವಿಲ್ಲ. ಅದಲ್ಲದೆ ಮುಖ್ಯಮಂತ್ರಿಯವರೇ ಪುತ್ತೂರಿನಲ್ಲಿ ಭರವಸೆ ನೀಡಿದ್ದು, ಅವರಿಗೆ ಟಿಕಟ್ ನಿರಾಕರಣೆ ಮಾಡಲು ಯಾವುದೇ ಕಾರಣಗಳಿಲ್ಲ. ಪಕ್ಷದ ಹಿರಿಯರಾದ ಹೇಮನಾಥ ಶೆಟ್ಟಿ ಅವರು ಪುತ್ತೂರಿನ ಟಿಕೆಟ್ ಕೇಳುವುದರಲ್ಲಿ ತಪ್ಪೇನೂ ಇಲ್ಲ. ಪಕ್ಷದಲ್ಲಿ ದುಡಿದ ಯಾರು ಕೂಡ ಟಿಕೆಟ್ ಕೇಳಬಹುದು. ನಾನು ಬೆಳ್ತಂಗಡಿಯವಳು. ಪುತ್ತೂರಿನಲ್ಲಿ ನನಗೆ ಟಿಕೆಟ್ ಕೊಡಿ ಎಂದು ಕೇಳಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದು, ಪಕ್ಷ ಯಾರಿಗೆ ಕೊಡುತ್ತದೋ ಅವರ ಪರವಾಗಿ ಎಲ್ಲರೂ ಕೆಲಸ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕ ಇಸಾಕ್ ಸಾಲ್ಮರ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಗೋನ್ಸಾಲ್ವಿಸ್ , ಸೇವಾದಳ ಮುಖಂಡ ಜೋಕಿಂ ಡಿಸೋಜ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಉಪಸ್ಥಿತರಿದ್ದರು.







