ಪುಸ್ತಕ ಪ್ರಕಾಶಕರಿಂದ ಲೇಖಕರಿಗೆ ಅನ್ಯಾಯ: ಡಾ.ವಿಜಯಾ

ಬೆಂಗಳೂರು, ಫೆ.5: ಕೆಲ ಪುಸ್ತಕ ಪ್ರಕಾಶಕರಿಂದ ಲೇಖಕರಿಗೆ ಆಗುವ ಅನ್ಯಾಯದ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತೆ ಡಾ.ವಿಜಯಾ ಹೇಳಿದರು.
ಸೋಮವಾರ ನಗರದ ಕನ್ನಡಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ‘ದೇಸಿ ಕಮ್ಮಟ, ಲೋಕ ಕಾಣದ ಲೋಕ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಪ್ರಕಾಶಕರು ಲೇಖಕರ ಕೃತಿಗಳನ್ನು ಮುದ್ರಿಸುವುದಾಗಿ ತಿಳಿಸಿ ಯಾವುದೇ ಒಪ್ಪಂದ ಮಾಡಿಕೊಳ್ಳದೆ ಹಣ ಪಡೆಯುತ್ತಾರೆ. ಯಾವುದೇ ಒಪ್ಪಂದವಿಲ್ಲದಿರುವ ಈ ಕ್ಷೇತ್ರವನ್ನು ಪ್ರಕಾಶೋದ್ಯಮ ಎಂದು ಕರೆಯಲು ಹೇಗೆ ಸಾಧ್ಯ. ಈ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಲೋಕದ ಕಣ್ಣಿಗೆ ಕಾಣುವಂತೆ ಮಾಡುವ ಕಾರ್ಯವಾಗಬೇಕು. ಹೆಣ್ಣು ತನ್ನ ಪರಿಕಲ್ಪನೆಯ ಪುರುಷ ಸಮುದಾಯ ಎಂಬ ಅಹಂಕಾರವನ್ನು ಮೆಟ್ಟಿ ನಿಲ್ಲುವಂತಹ ಧೈರ್ಯ ಮಾಡುವುದರ ಜತೆಗೆ ಒಗ್ಗೂಡಿದರೆ ಸಮಾಜವನ್ನು ಬದಲಾಯಿಸುವ ಶಕ್ತಿ ಹೆಣ್ಣಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತವಾಗಿ ನಮಗೆ ಮೂಡುತ್ತಿರುವ ಬಹು ದೊಡ್ಡ ಅರಿವೆಂದರೆ ಮಹಿಳಾ ಹೋರಾಟವನ್ನು ಯಾವುದೋ ಕೆಲವು ಸವಲತ್ತಿನ ವರ್ಗಗಳ ಹೋರಾಟ ಎಂದು ಪರಿಗಣಿಸದೆ ಇರುವುದು, ಅಷ್ಟೇ ಅಲ್ಲದೆ ಮಹಿಳೆಯರು ವರ್ಗಾತೀತವಾಗಿ ಒಗ್ಗೂಡುವುದರಿಂದ ಯಶಸ್ಸು ನಮ್ಮದಾಗಿರುತ್ತದೆ ಎಂದರು.
ಕರ್ನಾಟಕ ಮೊದಲ ಮಹಿಳಾ ಐಪಿಎಸ್ ಅಧಿಕಾರಿ(ನಿವೃತ್ತ) ಜೀಜಾ ಹರಿಸಿಂಗ್ ಮಾತನಾಡಿ, ಸಮಾನತೆ ಮತ್ತು ಸಬಲೀಕರಣ ಮಹಿಳಾ ಲೋಕದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಡೀ ಪ್ರಪಂಚದ ಶಕ್ತಿಯುತ ಕಾನೂನುಗಳು ಮಹಿಳೆಯರ ಕೈಯಲ್ಲಿದೆ. ಆದರೆ, ಅದನ್ನು ಬಳಸುವ ಕ್ರಮ ಆಕೆಗೆ ಅರಿವಾಗಬೇಕು ಎಂದರು.
ಕಮ್ಮಟದ ನಿರ್ದೇಶಕಿ ಡಾ.ಎಂ.ಎಸ್.ಆಶಾದೇವಿ ಮಾತನಾಡಿ, ಸಂಘಟನೆಯ ಕೊರತೆ ಮಹಿಳಾ ಲೋಕದ ದೊಡ್ಡ ಸಮಸ್ಯೆಯಾಗಿದೆ. ಮಹಿಳಾ ಹೋರಾಟಗಳಿಗೆ ನಿಜವಾದ ಅರ್ಥದಲ್ಲಿ ಜಯ ಸಿಗಬೇಕೆಂದರೆ ಮಹಿಳೆಯರು ವರ್ಗಾತೀತವಾಗಿ ಒಗ್ಗೂಡಬೇಕು. ಹೆಣ್ಣು ಮಕ್ಕಳ ಧ್ವನಿಯನ್ನು ಹೊರಹಾಕಲು ಭಾಷೆಯ ಅಗತ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಪ್ರಾಧಿಕಾರದ ಸದಸ್ಯೆ ಡಾ.ಜಯದೇವಿ ಗಾಯಕವಾಡ, ಡಾ. ಕವಿತಾ ರೈ ಸೇರಿ ಪ್ರಮುಖರು ಉಪಸ್ಥಿತರಿದ್ದರು.







