ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಗ್ರಾಮೀಣಾಭಿವೃದ್ಧಿ ವಿವಿ ಆರಂಭ: ವಜುಭಾಯಿ ವಾಲಾ

ಬೆಂಗಳೂರು, ಫೆ. 5: ಗ್ರಾಮೀಣ ಪ್ರದೇಶದ ಶೇ.87ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ. 2018ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ 30 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತಗೊಳ್ಳಲಿವೆ ಎಂದು ರಾಜ್ಯಪಾಲ ವಜುಭಾಯಿವಾಲಾ ಪ್ರಕಟಿಸಿದ್ದಾರೆ.
ಸೋಮವಾರ ವಿಧಾನ ಮಂಡಲ ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳಿಗಾಗಿ ಪ್ರಾರಂಭವಾಗಿರುವ ರಾಷ್ಟ್ರದ ಮೊಟ್ಟ ಮೊದಲ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯವು 2018ನೆ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗಿದೆ ಎಂದು ಘೋಷಿಸಿದರು.
ಸರಕಾರವು ರಾಜ್ಯದ 1.4 ಕೋಟಿ ಕುಟುಂಬಗಳಿಗೆ ಉತ್ತಮ ಆರೋಗ್ಯ ಕಲ್ಪಿಸುವ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿಯಲ್ಲಿ ಆರ್ಥಿಕ-ಸಾಮಾಜಿಕ ಹಿನ್ನೆಲೆ ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ವರ್ಗದ ಜನರು, ಸರಕಾರಿ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಚಿಕಿತ್ಸಾ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯು ಮಾಡಿರುವ ಸಾಧನೆಗಳಿಗಾಗಿ ರಾಜ್ಯಕ್ಕೆ ಹಲವು ಪ್ರಶಸ್ತಿಗಳು ಸಂದಿವೆ. ಸತತವಾಗಿ ಮೂರನೆ ಬಾರಿಗೆ ನನ್ನ ಸರಕಾರ 2017-18ನೆ ಸಾಲಿನಲ್ಲಿ ರಾಷ್ಟ್ರೀಯ ಇ-ಪುರಸ್ಕಾರದ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ. ಗ್ರಾಮೀಣ ಆಡಳಿತದಲ್ಲಿ ಪರಿಣಾಮಕಾರಿಯಾದ ವ್ಯವಸ್ಥೆ ರೂಪಿಸಲು ಹಲವು ನೂತನ ಕ್ರಮಗಳ ಮೂಲಕ ಪಾರದರ್ಶಕತೆ ತಂದಿದೆ ಎಂದು ಶ್ಲಾಘಿಸಿದರು.
‘ಸಿಎಂ ಬೆಂಗಳೂರು ಒಂದು ಲಕ್ಷ ವಸತಿ ಯೋಜನೆ’ಯಡಿ ಬೆಂಗಳೂರು ನಗರದಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. 5.43 ಲಕ್ಷ ಮನೆ ನಿವೇಶನಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತರಲು ಕರ್ನಾಟಕ ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮ- 2017ನ್ನು ಅಧಿಸೂಚಿಸಲಾಗಿದೆ ಮತ್ತು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಲಾಗಿದೆ ಎಂದರು.
ನನ್ನ ಸರಕಾರವು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ಪ್ರಸಕ್ತ ವರ್ಷದಲ್ಲಿ 50ಹೊಸ ತಾಲೂಕುಗಳನ್ನು ರಚನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೊಟ್ಟ ಮೊದಲ ಬಾರಿಗೆ 2,450 ಕೋಟಿ ರೂ.ಬೆಳೆ ನಷ್ಟ ಪರಿಹಾರವನ್ನು 35ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಹೇಳಿದರು.
‘ಮಾಜಿ ಸಿಎಂ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು ಸರಿಯಲ್ಲ. ರಾಜ್ಯ ಸರಕಾರದ ಭ್ರಷ್ಟಾಚಾರದ ಆರೋಪಗಳಿದ್ದರೆ ದಾಖಲೆ ಕೊಡಬೇಕು. ಸುಳ್ಳು ಆರೋಪ ಅವರಿಗೆ ಶೋಭೆಯಲ್ಲ. ಪ್ರಧಾನಿ ಮಹಾದಾಯಿ ಬಗ್ಗೆ ಒಂದೂ ಮಾತನಾಡದಿರುವುದು ಅಕ್ಷಮ್ಯ’
-ಝಮೀರ್ ಅಹ್ಮದ್ ಖಾನ್, ಜೆಡಿಎಸ್ ಬಂಡಾಯ ಶಾಸಕ







