ಹಳ್ಳಿಮನೆ ರೊಟ್ಟೀಸ್‌ನ ಶಿಲ್ಪಾರಿಗೆ ಮಹೀಂದ್ರಾ ಕೊಡುಗೆ !
ಮಹೀಂದ್ರಾ ಪಿಕ್‌ಅಪ್ ವಾಹನ ಹಸ್ತಾಂತರ

ಮಂಗಳೂರು, ಫೆ.5: ಹಳ್ಳಿಮನೆ ರೊಟ್ಟೀಸ್ ಖ್ಯಾತಿಯ ಶಿಲ್ಪಾರಿಗೆ ಮಹೀಂದ್ರಾ ಕಂಪನಿಯ ಸಿಇಒ ಆನಂದ್ ಮಹೀಂದ್ರಾ ಅವರು ಈ ಹಿಂದೆ ನೀಡಿದ್ದ ವಾಗ್ದಾನದಂತೆ ಇಂದು ಕಂಪನಿಯಿಂದ ನೂತನ ಪಿಕ್‌ಅಪ್ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.
ಸ್ವಾವಲಂಬಿ ಬದುಕನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಮಣ್ಣಗುಡ್ಡದಲ್ಲಿ ಸಣ್ಣ ಮೊಬೈಲ್ ಕ್ಯಾಂಟೀನ್‌ನಲ್ಲಿ ಬಿಸಿಬಿಸಿ ರೊಟ್ಟಿಯನ್ನು ತಯಾರಿಸುತ್ತಿದ್ದ ಶಿಲ್ಪಾ ಅವರ ಛಲವನ್ನು ಮೆಚ್ಚಿ ಮಹೀಂದ್ರಾ ಕಂಪನಿಯ ಸಿಇಒ ಇತ್ತೀಚೆಗೆ ಟ್ವೀಟ್ ಮಾಡಿ ವಾಹನವನ್ನು ಕೊಡುಗೆಯಾಗಿ ನೀಡುವುದಾಗಿ ವಾಗ್ದಾನ ಮಾಡಿದ್ದರು.
ಅದರಂತೆ ಇಂದು ಮಂಗಳೂರಿನ ಮಹೀಂದ್ರಾ ವಾಹನಗಳ ಅಧಿಕೃತ ಡೀಲರ್ ಆಗಿರುವ ಕರ್ನಾಟಕ ಏಜೆನ್ಸಿಸ್‌ನಲ್ಲಿ ಶಿಲ್ಪಾ ಅವರಿಗೆ ಹೊಸ ವಾಹನವನ್ನು ಹಸ್ತಾಂತರಿಸಲಾಯಿತು.
ಹಾಸನ ಮೂಲದ ಶಿಲ್ಪಾ ಅವರು ಸಣ್ಣ ಮೊಬೈಲ್ ಕ್ಯಾಂಟೀನ್ ಇಟ್ಟುಕೊಂಡು ಬಯಲು ಸೀಮೆಯ ಆಹಾರಗಳನ್ನು ಮಂಗಳೂರಿನ ನಗರ ವಾಸಿಗಳಿಗೆ ಒದಗಿಸುತ್ತಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ್ದ ಮಹೀಂದ್ರಾ ಸಿಇಒ ಶಿಲ್ಪಾರಿಗೆ ಈ ಕೊಡುಗೆಯನ್ನು ಪ್ರಕಟಿಸಿದ್ದರು.
ನಗರದಲ್ಲಿ ಮತ್ತೊಂದು ಕ್ಯಾಂಟೀನ್‌ಗೆ ಸಿದ್ಧತೆ !
ಶಿಲ್ಪಾ ಅವರು ಈಗಾಗಲೇ ಮಣ್ಣಗುಡ್ಡದಲ್ಲಿ ವ್ಯಾಪಾರ ಮಾಡುತ್ತಿದ್ದು, ಮಹೀಂದ್ರಾ ಕಂಪನಿಯ ಕೊಡುಗೆಯಿಂದ ಪಡೆಯ ನೂತನ ವಾಹನದಲ್ಲಿ ಮಂಗಳೂರಿನ ಇನ್ನೊಂದು ಕಡೆ ಇದೇ ಮಾದರಿಯ ಹಳ್ಳಿಮನೆ ರೊಟ್ಟಿಸ್ ಆರಂಭಿಸಲು ತೀರ್ಮಾನಿಸಿದ್ದಾರೆ.
ಪ್ರಸ್ತುತ ನಾನೇ ಮುಂದೆ ನಿಂತು ವ್ಯಾಪಾರ ನಡೆಸುತ್ತಿದ್ದೇನೆ. ಈಗ ನನಗೆ ಸಿಕ್ಕ ಹೊಸ ಪಿಕಪ್ ವಾಹನದಲ್ಲಿ ಇನ್ನೊಂದು ಕಡೆ ವ್ಯಾಪಾರ ನಡೆಸಲು ಸಿದ್ಧತೆ ನಡೆಸಿದ್ದೇನೆ. ಇದಕ್ಕೆ ಈಗಾಗಲೇ ಕಂಕನಾಡಿ ಪರಿಸರದಲ್ಲಿ ಒಂದು ಜಾಗವನ್ನು ಗುರುತಿಸಿದ್ದೇನೆ. ಪಾಲಿಕೆ ಸಚೇತಕ ಶಶಿಧರ್ ಹೆಗ್ಡೆ ಹಾಗೂ ಇತರರು ನನಗೆ ನೆರವಾಗಿದ್ದಾರೆ. ಆಸಕ್ತರನ್ನು ಹೊಸ ಉದ್ಯಮಕ್ಕೆ ನೇಮಿಸಿ ಆ ಮೂಲಕ ಹಳ್ಳಿಮನೆ ರೊಟ್ಟಿಸ್ ಉದ್ಯಮವನ್ನು ವಿಸ್ತರಿಸಲಿದ್ದೇನೆ ಎಂದು ಶಿಲ್ಪಾ ಪ್ರತಿಕ್ರಿಯಿಸಿದ್ದಾರೆ.
ಆರಂಭದಲ್ಲಿ ಮಹೀಂದ್ರಾ ಗ್ರೂಪ್ ಚೆಯರ್ಮ್ಯಾನ್ ಟ್ವೀಟ್ ಮಾಡಿದ ಬಗ್ಗೆ ಮಾಧ್ಯಮದವರು ನನ್ನ ಗಮನಕ್ಕೆ ತಂದಾಗ ಅದನ್ನು ನಂಬಲೇ ಇಲ್ಲ. ಬಳಿಕ ಕರ್ನಾಟಕ ಏಜೆನ್ಸಿಯವರು ನನ್ನ ಮನೆಗೆ ಬಂದು ಮಾಹಿತಿ ಕೇಳಿದಾಗಲೇ ಪಕ್ಕಾ ಆಯಿತು. ಇದೀಗ ವಾಹನ ಕೈಗೆ ಸಿಕ್ಕಿದ್ದು, ಅತೀವ ಸಂತಸವಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಶಿಲ್ಪ ಸಂತಸ ಹಂಚಿಕೊಂಡರು.
ಕರ್ನಾಟಕ ಏಜೆನ್ಸಿಸ್ ಸಿಇಒ ಆರ್.ಸಿ.ರಾಡ್ರಿಗಸ್ ಶಿಲ್ಪಾರಿಗೆ ವಾಹನದ ಕೀಲಿ ಕೈ ಹಸ್ತಾಂತರಿಸಿದರು. ಕರ್ನಾಟಕ ಏಜೆನ್ಸಿಸ್ ಪಾಲುದಾರ ಸಂತೋಷ್ ರಾಡ್ರಿಗಸ್, ಕಮರ್ಷಿಯಲ್ ಸೇಲ್ಸ್ ಹೆಡ್ ಫಾರ್ಚುನೆಟ್ ಸೆರಾವೋ, ಶಿಲ್ಪಾಳ ಸಹೋದರ ಚಿರಂಜೀವಿ, ತಾಯಿ ನಾಗರತ್ನ, ತಂದೆ ಚಂದ್ರಶೇಖರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







