ಮಾಜಿ ಸಚಿವ ವಿಜಯಶಂಕರ್ ಕಾಂಗ್ರೆಸ್ ಸೇರ್ಪಡೆ
"ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಬೇಸತ್ತಿದ್ದೇನೆ"

ಬೆಂಗಳೂರು, ಫೆ. 5: ಮಾಜಿ ಸಚಿವ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್.ವಿಜಯಶಂಕರ್ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ವಿಜಯಶಂಕರ್ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಕ್ಕೆ ಬರಮಾಡಿಕೊಂಡರು.
ಬೇಸತ್ತು ಪಕ್ಷಕ್ಕೆ: ಬಿಜೆಪಿಯ ಸಮಾಜ ವಿಭಜನೆ ಮತ್ತು ಕೋಮುವಾದದ ರಾಜಕೀಯದಿಂದ ಬೇಸತ್ತು ಮಾಜಿ ಸಚಿವ ವಿಜಯಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸರಕಾರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿದ್ದು, ಪಕ್ಷ ಸಂಘಟನೆಗೆ ಶ್ರಮಿಸಲಿದ್ದಾರೆಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಾಜಿ ಸಚಿವ ವಿಜಯಶಂಕರ್ ಮೂಲತಃ ಯುವ ಕಾಂಗ್ರೆಸ್‌ನಿಂದ ಬಂದವರು. ಕಾರಣಾಂತರಗಳಿಂದ ಬಿಜೆಪಿ ಸೇರಿದ್ದರು. ಸುದೀರ್ಘ ಕಾಲ ರಾಜಕಾರಣದಲ್ಲಿದ್ದಾರೆ. ಇವರು ಯಾವ ಪಕ್ಷದಲ್ಲಿದ್ದರೂ ಆ ಪಕ್ಷದ ಆಸ್ತಿ. ಸರಳ, ಸಜ್ಜನ ರಾಜಕಾರಣಿ. ಅವರು ಲಘುವಾಗಿ ಯಾರೊಬ್ಬರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಯಾವುದೇ ಪಕ್ಷದಲ್ಲೂ ಇವರಿಗೆ ವೈರಿಗಳಿಲ್ಲ. ಬಿಜೆಪಿಯನ್ನು ಅನಿವಾರ್ಯ ಕಾರಣದಿಂದ ಬಿಟ್ಟ ವಿಜಯಶಂಕರ್, ಕೈ-ಬಾಯಿ ಶುದ್ಧವಾಗಿಟ್ಟುಕೊಂಡಿರುವ ಪ್ರಾಮಾಣಿಕ ರಾಜಕಾರಣಿ. ಬಿಜೆಪಿಯಲ್ಲಿ ಸಾಕಷ್ಟು ನೋವು ಅನುಭವಿಸಿದ್ದರು ಎಂದು ಹೇಳಿದರು.
ಅನಂತ್‌ಕುಮಾರ್ ಹೆಗಡೆ, ಸಂಸದರಾದ ಪ್ರತಾಪ್ ಸಿಂಹ, ಶೋಭಾ, ಕಟೀಲು ಅಂತವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಟೀಕಿಸಿದ ಸಿದ್ದರಾಮಯ್ಯ, ಅಮಿತ್ ಶಾ ಕೋಮುಗಲಭೆ ಮಾಡಿ ಅಂತ ಹೇಳೋದು, ಈಶ್ವರಪ್ಪ ಮೆದುಳು ನಾಲಿಗೆಗೆ ಲಿಂಕ್ ತಪ್ಪಿ, ಸುಳ್ಳು-ಪಳ್ಳು ಹೇಳಬೇಕು ಅಂತ ಕಾರ್ಯಕರ್ತರಿಗೆ ಕರೆ ನೀಡಿದ್ದರಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕ ದಿವಂಗತ ಚಿಕ್ಕಮಾದು ಅವರ ಪುತ್ರ ಅನಿಲ್ ಚಿಕ್ಕಮಾದು, ಎಚ್‌ಡಿ ಕೋಟೆ ಮಾಜಿ ಶಾಸಕ ದೊಡ್ಡ ನಾಯಕ, ಜೆಡಿಎಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹುಣಸೂರಿನ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ಎಚ್.ಎಂ. ರೇವಣ್ಣ, ಸಂಸದ ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.
‘ನಾನು 1980ರಿಂದ 1990ರ ವರೆಗೆ ಕಾಂಗ್ರೆಸ್‌ನಲ್ಲಿದ್ದೆ, ಇದೀಗ ಮರಳಿ ಮನೆಗೆ ಬಂದಿದ್ದು ಬಹಳ ಖುಷಿ ತಂದಿದೆ. ಶಾಸಕ ಚಿಕ್ಕಮಾದು ಹಾಗೂ ನಾನು ಸಮಾನ ಮನಸ್ಕರು. ನಾನು ಅರಸು ಬೆಂಬಲಿಗ. ನಾನು ಸಮಸ್ಯೆಯೂ ಅಲ್ಲ, ಸಮಯ ಸಾಧಕನೂ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ನನ್ನ ಕೈಯಿಂದ ಆಗುವ ಅಳಿಲು ಸೇವೆ ಸಲ್ಲಿಸಲು ಸಿದ್ಧ’
-ಸಿ.ಎಚ್.ವಿಜಯಶಂಕರ್, ಮಾಜಿ ಸಚಿವ







