ಕರ್ನಾಟಕ ‘ಪ್ರಥಮ’ಗಳ ತವರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆ.5: ದೇಶದ ಒಟ್ಟಾರೆ ಐಟಿ-ಬಿಟಿ ರಫ್ತಿನಲ್ಲಿ ಶೇ.38ರಷ್ಟು ಪಾಲು ನಮ್ಮ ರಾಜ್ಯದ್ದು, ರೇಷ್ಮೆ ಉತ್ಪಾದನೆಯಲ್ಲಿ ನಮ್ಮ ರಾಜ್ಯ ಪ್ರಥಮ, ನಾವು ಅಧಿಕಾರದಲ್ಲಿದಾಗ ಬಂಡವಾಳ ಹೂಡಿಕೆ, ಕೈಗಾರಿಕಾ ವಲಯದಲ್ಲಿ 11ನೆ ಸ್ಥಾನದಲ್ಲಿದ್ದ ರಾಜ್ಯವನ್ನು 2016, 2017ರಲ್ಲಿ ಸತತವಾಗಿ ಮೊದಲನೆ ಸ್ಥಾನಕ್ಕೆ ತಂದಿದ್ದೇವೆ. ಈ ಅಂಕಿ ಅಂಶಗಳನ್ನು ನಾವಲ್ಲ, ಕೇಂದ್ರ ಸರಕಾರವೇ ಹೇಳುತ್ತಿರುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಬಹುವಲಯ, ನವೋದ್ಯಮ ನೀತಿ ಘೋಷಣೆ ಮಾಡಿದ ಮೊದಲ ರಾಜ್ಯ ನಮ್ಮದು ಎಂದರು.
ರಾಜ್ಯದ 157 ಎಪಿಎಂಸಿಗಳಲ್ಲಿ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದದ್ದು ನಾವು, ಈಗ ಬೇರೆ ರಾಜ್ಯಗಳು ಈ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ರೈತರ ಆದಾಯವು ಶೇ.38ರಷ್ಟು ಹೆಚ್ಚಳವಾಗಿದೆ ಎಂದು ನೀತಿ ಆಯೋಗ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.
ಎಲೆಕ್ಟ್ರಿಕಲ್ ವಾಹನಗಳ ನೀತಿ ಘೋಷಣೆ, ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ನಮ್ಮದು. ನವೋದ್ಯಮ ಹಾಗೂ ಆವಿಷ್ಕಾರ ನೀತಿ ಜಾರಿಗೆ ತಂದದ್ದು ನಾವು. ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಜಾರಿಗೆ ತಂದ ಮೊದಲ ರಾಜ್ಯ ನಮ್ಮದು. ಕೆಎಸ್ಸಾರ್ಟಿಸಿಗೆ ನಮ್ಮ ಅಧಿಕಾರಾವಧಿಯಲ್ಲಿ 207 ಪ್ರಶಸ್ತಿಗಳು ಬಂದಿವೆ ಎಂದರು.
ರೈತರಿಗೆ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡುತ್ತಿರುವ ಮೊದಲ ರಾಜ್ಯ ನಮ್ಮದು. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಆರಂಭಿಸಿರುವ ಮೊದಲ ರಾಜ್ಯ ನಮ್ಮದು. ಕೃಷಿ ಭಾಗ್ಯ ಯೋಜನೆ, ಎಸ್ಸಿ-ಎಸ್ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡುವ ಪ್ರಗತಿಪರ ಕಾನೂನು, ಲಂಬಾಣಿ, ತಾಂಡಾಗಳು, ಹಾಡಿಗಳು, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ, ಹಕ್ಕು ಪತ್ರ ನೀಡುವ ಕಾನೂನು ಮಾಡಿರುವ ಮೊದಲ ರಾಜ್ಯ ನಮ್ಮದು ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ, ವರ್ಗದವರಿಗೆ ಗುತ್ತಿಗೆ ನೀಡುವಲ್ಲಿ ಮೀಸಲಾತಿ ತಂದು, ಅದಕ್ಕೆ ಕಾನೂನು ತಂದಿರುವ ಮೊದಲ ರಾಜ್ಯ ನಮ್ಮದು. ನಮ್ಮ ಕಾರ್ಯವೈಖರಿಯನ್ನು ಮೆಚ್ಚಿ ಕೇಂದ್ರ ಸರಕಾರದವರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ 2 ಸಾವಿರ ಮೆಗಾವ್ಯಾಟ್ ಸೌರ ಶಕ್ತಿ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪನೆ ಮಾಡಿದ್ದೇವೆ. ರಾಷ್ಟ್ರಮಟ್ಟದಲ್ಲಿ ಗ್ರಾಮೀಣ ಪ್ರದೇಶದ ವಿದ್ಯುದ್ಧೀಕರಣ ಪ್ರಮಾಣವು ಶೇ.88ರಷ್ಟಿದ್ದರೆ, ನಮ್ಮ ರಾಜ್ಯದಲ್ಲಿ ಶೇ.98ರಷ್ಟು ಗುರಿ ಸಾಧಿಸಿದ್ದೇವೆ ಎಂದು ಮುಖ್ಯುಂತ್ರಿ ತಿಳಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ವರ್ಗಾವಣೆ ಮಾಡಿದ ಮೊದಲನೆ ರಾಜ್ಯ ಕರ್ನಾಟಕ. ಇಷ್ಟೆಲ್ಲ ಪ್ರಥಮಗಳಿರುವಾಗ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎನ್ನುತ್ತಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪ್ರಥಮ 10 ರಾಜ್ಯಗಳ ಪಟ್ಟಿ ನೋಡಿದ್ದರೆ ಪ್ರಧಾನಿಗೆ ಗೊತ್ತಾಗುತ್ತಿತ್ತು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ(ಎನ್‌ಸಿಆರ್‌ಬಿ) ಪ್ರಕಾರ ಉತ್ತರಪ್ರದೇಶದಲ್ಲಿ ಅಪರಾಧಗಳ ಪ್ರಮಾಣ ಅತೀ ಹೆಚ್ಚು ಶೇ.11.5ರಷ್ಟಿದೆ. ನಂತರ ಸ್ಥಾನದಲ್ಲಿ ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಇದೆ. ಅಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಇದ್ದಾಗ ಶೇ.6.7ರಷ್ಟಿದ್ದ ಅಪರಾಧಗಳ ಪ್ರಮಾಣ ಈಗ ಶೇ.5ಕ್ಕೆ ಇಳಿಕೆಯಾಗಿದೆ. ಆದರೂ, ರಾಜ್ಯದ ಜನತೆಗೆ ಮೋದಿ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ, ಪ್ರಧಾನಿ ಸ್ಥಾನಕ್ಕೆ ದೊಡ್ಡ ಅಗೌರವ ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೆ, ನಾವು ಹೂಡಿಕೆಯಲ್ಲಿ ಸತತವಾಗಿ ಎರಡು ವರ್ಷಗಳಿಂದ ಮೊದಲನೆ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿತ್ತೇ ? ನಾವು ಪ್ರವಾಸಿ ಭಾರತೀಯ ದಿವಸ್, ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಮಾಡಿದ್ದೇವೆ. ಎಲ್ಲರೂ ರಾಜ್ಯದ ಕಾನೂನು ಸುವ್ಯವಸ್ಥೆ, ಕೈಗಾರಿಕಾ ಸ್ನೇಹಿ, ಹೂಡಿಕೆ ಸ್ನೇಹಿ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ರೋಷನ್‌ಬೇಗ್, ರಾಮಲಿಂಗಾರೆಡ್ಡಿ, ಯು.ಟಿ.ಖಾದರ್, ಎಚ್.ಕೆ.ಪಾಟೀಲ್, ಬಸವರಾಜ ರಾಯರಡ್ಡಿ, ಎಚ್.ಎಂ.ರೇವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು







