ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿರ್ಲಕ್ಷ್ಯ: ತಹಶೀಲ್ದಾರ್ ಕ್ರಮ ಖಂಡಿಸಿ ಪಿವಿಸಿ ಪ್ರತಿಭಟನೆ
ಬೆಂಗಳೂರು, ಫೆ.5: ಬೆಂಗಳೂರು ದಕ್ಷಿಣ ತಾಲೂಕು ಕೊತ್ತನೂರು ಸರ್ವೆ ನಂ.156 ಸರಕಾರಿ ಭೂಮಿಯಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಆದರೆ, ತಹಶೀಲ್ದಾರ್ ಮಾತ್ರ ಭವನಕ್ಕೆ ಅನುಮತಿ ನೀಡಲು ನಿರ್ಲಕ್ಷ ವಹಿಸುತ್ತಿದ್ದಾರೆಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಸರಕಾರಿ ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ಉಪಯೋಗಿಸುವುದು ಸರಕಾರದ ನಿಯಮವಾಗಿದೆ. ಅದರನ್ವಯ ಹೆಚ್ಚುವರಿ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಆದರೆ, ಈ ಪ್ರದೇಶಕ್ಕೆ ಸಂಬಂಧಿಸಿದ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಭ್ರಷ್ಟರಿಂದ ಹಣ ಪಡೆದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರಜಾ ವಿಮೋಚನಾ ಚಳವಳಿಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಮಾತನಾಡಿ, ಸರಕಾರಿ ಭೂಮಿ ಭ್ರಷ್ಟರ ಕೈಗೆ ಹೋಗಬಾರದು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ. ಹೀಗಾಗಿ ಕೊತ್ತನೂರು ಸರ್ವೆ ನಂ.156ರ ಜಾಗವನ್ನು ತಂತಿ ಬೇಲಿ ಸಂರಕ್ಷಿಸಬೇಕು. ನಿವೇಶನ ರಹಿತ ಎಸ್ಸಿ, ಎಸ್ಟಿ ಸಮುದಾಯಕ್ಕೆ 4 ಎಕರೆ ಜಾಗವನ್ನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.





