ಮುಖ್ತಾರುನ್ನೀಸಾ ಬೇಗಂ ಸೇರಿ ಅಗಲಿದ ಗಣ್ಯರಿಗೆ ವಿಧಾನ ಮಂಡಲದಲ್ಲಿ ಶ್ರದ್ಧಾಂಜಲಿ

ಬೆಂಗಳೂರು, ಫೆ. 5: ದಕ್ಷಿಣ ಭಾರತದ ಮೊಟ್ಟ ಮೊದಲ ಮುಸ್ಲಿಮ್ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಜಿ ಶಾಸಕ ಮುಖ್ತಾರುನ್ನೀಸಾ ಬೇಗಂ, ಮಾಜಿ ಶಾಸಕರಾದ ಯು.ಎಂ.ಮಾದಪ್ಪ, ನಾಗಪ್ಪ, ಆರ್.ನಾರಾಯಣಪ್ಪ, ಪ್ರಹ್ಲಾದ್ ರೆಮಾನಿ, ಕುಮಾರಗೌಡ ಪಾಟೀಲ್ ಸೇರಿ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸೋಮವಾರ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಬಳಿಕ ಮತ್ತೆ ಕಲಾಪ ಸಮಾವೇಶಗೊಂಡಾಗ ಸ್ಪೀಕರ್ ಕೋಳಿವಾಡ ಹಾಗೂ ಸಭಾಪತಿ ಶಂಕರಮೂರ್ತಿ ಪ್ರತ್ಯೇಕವಾಗಿ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಅಗಲಿದ ಗಣ್ಯರ ಗುಣಗಾನ ಮಾಡಿದರು.
‘ಇಸ್ಪೀಕರ್ ಸಾರ್’..: ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊಟ್ಟ ಮೊದಲ ಮುಸ್ಲಿಮ್ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮುಖ್ತಾರುನ್ನೀಸಾ ಬೇಗಂ, ಆಗಿನ ಕಾಲಕ್ಕೆ ಎಂಎ ಪದವೀಧರೆಯಾಗಿದ್ದರು. ಶಿಕ್ಷಣ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬೇಗಂ, ಬಡ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಅಪಾರವಾಗಿ ಶ್ರಮಿಸುತ್ತಿದ್ದರು. ಮಾತ್ರವಲ್ಲ, ವಿಧಾನಸಭೆಯಲ್ಲಿ ಮಹಿಳೆಯರ ಧ್ವನಿಯಾಗಿದ್ದರು. ಅವರು ‘ಇಸ್ಪೀಕರ್ ಸಾರ್..’ ಎಂದು ಕರೆಯುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ಇದಕ್ಕೆ ಧ್ವನಿಗೂಡಿಸಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆಡಳಿತ ಪಕ್ಷದ ಸದಸ್ಯ ಶಿವಮೂರ್ತಿ, ಜೆಡಿಎಸ್‌ನ ಹಿರಿಯ ಸದಸ್ಯ ಡಿ.ಸಿ.ತಮ್ಮಣ್ಣ ಅಗಲಿದ ಗಣ್ಯರನ್ನು ಸ್ಮರಿಸಿದರು. ಆ ಬಳಿಕ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮೂಲಕ ವಿಧಾನ ಮಂಡಲದಲ್ಲಿ ಗೌರವ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
‘ಶಿಕ್ಷಣ, ಆರೋಗ್ಯ, ನೀರಾವರಿ, ಸಮಾಜಕಲ್ಯಾಣ ಸೇರಿ ಪ್ರಮುಖ ಇಲಾಖೆಗಳ ಪ್ರಗತಿಗೆ ಸಂಬಂಧಿಸಿದ ಅಂಕಿಅಂಶಗಳು ಸತ್ಯಕ್ಕೆ ದೂರ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ, ತಪ್ಪು ಸಂದೇಶ ನೀಡುವ ಮೂಲಕ ರಾಜ್ಯ ಸರಕಾರ ರಾಜ್ಯಪಾಲರ ಭಾಷಣವನ್ನು ದುರ್ಬಳಕೆ ಮಾಡಿಕೊಂಡಿದೆ. ಮಾತ್ರವಲ್ಲ, ಆಡಳಿತದ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ವಿಫಲಯತ್ನ ನಡೆಸಿದೆ’
-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ







