ನ್ಯಾ. ಲೋಯಾ ಸಾವು ಪ್ರಕರಣ: “ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಯಾವುದೇ ದಾಖಲೆಗಳಿಲ್ಲ”
ಹೊಸದಿಲ್ಲಿ, ಫೆ.5: ವಿಶೇಷ ಸಿಬಿಐ ನ್ಯಾಯಾಧೀಶರಾದ ಜಸ್ಟಿಸ್ ಬಿ.ಎಚ್ ಲೋಯಾ ಅವರ ಸಾವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಲೋಯಾ ಅವರ ಸಾವಿಗೂ ಮುನ್ನ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ನ್ಯಾಯಾಧೀಶರಾದ ಲೋಯಾ ಅವರಿಗೆ ಯಾವ ಸಮಸ್ಯೆಗಾಗಿ ಚಿಕಿತ್ಸೆ ನೀಡಲಾಗಿತ್ತು ಎಂಬ ಕುರಿತು ಆಸ್ಪತ್ರೆಯಲ್ಲಿ ಯಾವುದೇ ದಾಖಲೆ ಇಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಭಾರತೀಯ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ ಶ್ರೇಷ್ಠ ನ್ಯಾಯಾಲಯದ ಪೀಠವು ಫೆಬ್ರವರಿ 9ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ. ಇದಕ್ಕೂ ಮುನ್ನ ಲೋಯಾ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡುವಂತೆ ನ್ಯಾಯಾಲಯವು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿತ್ತು.
ಅಧಿಕೃತ ದಾಖಲೆಗಳ ಪ್ರಕಾರ, ಲೋಯಾ ಅವರು 2014ರಲ್ಲಿ ತಮ್ಮ ಸಹೋದ್ಯೋಗಿಯ ಮಗಳ ವಿವಾಹ ಸಮಾರಂಭ ಮತ್ತು ಭೋಜನಕೂಟದಲ್ಲಿ ಪಾಲ್ಗೊಂಡ ಮರುದಿನ ನಾಗಪುರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ, ಇದೊಂದು ಕೊಲೆಯೆಂದು ಆರೋಪಿಸಿದ ಅವರ ಕುಟುಂಬಸ್ಥರು ತಾವು ಲೋಯಾ ಅವರ ಅಂಗಿಯಲ್ಲಿ ರಕ್ತದ ಕಲೆಗಳನ್ನು ಕಂಡಿರುವುದಾಗಿ ತಿಳಿಸಿದ್ದರು. ಸಾಯುವ ಸಮಯದಲ್ಲಿ ಲೋಯಾ ಅವರು, ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದರು.