ತುಳುಭಾಷೆಯ ಸ್ಥಾನಮಾನಕ್ಕೆ ಹೋರಾಟ ಅಗತ್ಯ: ಬಾಬು ಅಮೀನ್

ಉಡುಪಿ, ಫೆ.5: ತುಳು ಭಾಷೆಗೆ ಸಿಗಬೇಕಾದ ಸ್ಥಾನಮಾನ ಈವರೆಗೆ ಸಿಗದೇ ಇರಲು ತುಳುವರು ಆ ಮಟ್ಟದಲ್ಲಿ ಹೋರಾಟ ನಡೆಸದೆ ತೋರಿದ ನಿರ್ಲಕ್ಷ್ಯವೇ ಕಾರಣ. ಆದುದರಿಂದ ಅದಕ್ಕಾಗಿ ಹೋರಾಟ ಅಗತ್ಯವಾಗಿ ನಡೆಯಬೇಕು ಎಂದು ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹೇಳಿದ್ದಾರೆ.
ಮೂಡಬಿದಿರೆ ಅಲಂಗಾರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ಇತ್ತೀಚೆಗೆ ನಡೆದ 9ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಸಮ್ಮೇಳನವನ್ನು ತುಳನಾಡ ವಿಶಿಷ್ಟ ತುಡರ್ ದೀಪ ಹಚ್ಚಿ ಉದ್ಘಾಟಿಸಿದ ಮುಂಬಯಿ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಮಾತನಾಡಿ, ತುಳು ಭಾಷೆಯ, ಸಂಸ್ಕೃತಿಯ ಸಾರ್ಥಕ ಸೇವೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸು ವುದು ಮತ್ತು ಕೈ ಜೋಡಿಸುವುದು ಪುಣ್ಯದ ಕೆಲಸ ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ಯಕ್ಷದ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕ ಸತೀಶ ಶೆಟ್ಟಿ ಪಟ್ಲ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ನೇತ್ರ ವೈದ್ಯರ ಸಂಘದ ಅಧ್ಯಕ್ಷ ಡಾ.ಸುಧೀರ್ ಹೆಗ್ಡೆ ಮಾತನಾಡಿದರು. ಈ ಸಂದರ್ಭದಲ್ಲಿ 27 ಮಂದಿ ಬಾಲ ಪ್ರತಿಭೆಗಳಿಗೆ ಕರ್ನಾಟಕ ಪ್ರತಿಭಾ ರತ್ನ ಗೌರವ ನೀಡ ಲಾಯಿತು.
ಉದ್ಯಮಿ ಯು.ಧರ್ಮಪಾಲ ದೇವಾಡಿಗ ಮತ್ತು ಯಕ್ಷಗಾನ ಕಲಾವಿದ ಅರುವ ಕೊರಗಪ್ಪಅವರನ್ನು ವಿಶ್ವ ತುಳುವ ರತ್ನ ಗೌರವ ನೀಡಿ ಸನ್ಮಾನಿಸ ಲಾಯಿತು. ಜಾನಪದ ವಿದ್ವಾಂಸ ಡಾ.ಲಕ್ಷ್ಮೀ ಜಿ.ಪ್ರಸಾದ್ ಬೆಂಗಳೂರು, ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ತಾರಾನಾಥ ಕಾಪಿಕಾಡ್ ಉಪಸ್ಥಿತರಿದ್ದರು. ಸಮ್ಮೇಳನದ ರೂವಾರಿ ಶೇಖರ ಅಜೆಕಾರು ಸ್ವಾಗತಿಸಿದರು. ವಿಜಯಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.





