ಭಾರತ ವಿಶ್ವಕಪ್ ಗೆದ್ದ ಬೆನ್ನಿಗೇ ಇನ್ನೊಂದು ಖುಷಿ
ಈ ಹಿಂದಿನ ಅಂಡರ್-19 ವಿಶ್ವಕಪ್ ವಿಜೇತ ನಾಯಕನಿಂದ ವಿಶೇಷ ಸಾಧನೆ

ಹೊಸದಿಲ್ಲಿ,ಫೆ.5: ಆರಂಭಿಕ ಬ್ಯಾಟ್ಸ್‌ಮನ್‌ಗೆ ಸಾಕಷ್ಟು ಶೌರ್ಯದ ಅಗತ್ಯವಿದೆ. ವೇಗದ ಬೌಲರ್‌ಗಳನ್ನು ಎದುರಿಸುವ ತಾಕತ್ತು ಅವರಿಗೆ ಇರಬೇಕಾಗುತ್ತದೆ. ಕೆಲವು ನಿರ್ದಿಷ್ಟ ಆಟಗಾರರು ತಮಗೆ ಗಾಯವಾದರೂ ಅದನ್ನು ಲೆಕ್ಕಿಸದೇ ರನ್ ಗಳಿಸಿದ ನಿದರ್ಶನ ನಮ್ಮ ಮುಂದಿದೆ. ಇದಕ್ಕೆ ಕ್ರಿಕೆಟ್ ಮೇಲಿನ ಅಭಿಮಾನ ಹಾಗೂ ತಂಡವನ್ನು ಗೆಲ್ಲಿಸಬೇಕೆಂಬ ಹಠವೇ ಕಾರಣ. ಇದಕ್ಕೆ ಹೊಸ ಸೇರ್ಪಡೆ ದಿಲ್ಲಿ ಬ್ಯಾಟ್ಸ್‌ಮನ್ ಉನ್ಮುಕ್ತ್ ಚಂದ್. ಚಂದ್ ತನ್ನ ದವಡೆಗೆ ಗಾಯವಾದ ಹೊರತಾಗಿಯೂ ಬ್ಯಾಟಿಂಗ್ ಮಾಡಿ ವಿಶೇಷ ಸಾಧನೆ ಮಾಡಿದ್ದಾರೆ.
ಸೋಮವಾರ ನಡೆದ ವಿಜಯ ಹಝಾರೆ ಟ್ರೋಫಿಯಲ್ಲಿ ಚಂದ್ ಈ ಸಾಹಸ ಮೆರೆದಿದ್ದಾರೆ. 2012ರಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದಾಗ ತಂಡದ ನಾಯಕತ್ವವಹಿಸಿದ್ದ ಚಂದ್‌ಗೆ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಗಾಯವಾಗಿತ್ತು. ಸೋಮವಾರ ಗಾಯವನ್ನು ಲೆಕ್ಕಿಸದೇ ಬ್ಯಾಟಿಂಗ್ ಮಾಡಿದ ಚಂದ್ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದರು.
ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ 125 ಎಸೆತಗಳನ್ನು ಎದುರಿಸಿರುವ ಚಂದ್ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನೊಳಗೊಂಡ 116 ರನ್ ಗಳಿಸಿದರು. ಚಂದ್ ಶತಕದ ನೆರವಿನಿಂದ ದಿಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 307 ರನ್ ಕಲೆ ಹಾಕಿತು.
ಕ್ರಿಕೆಟ್ ಪಂದ್ಯ ಈ ಹಿಂದೆ ಇಂತಹ ಹಲವು ಸಾಹಸ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 2002ರಲ್ಲಿ ವೆಸ್ಟ್‌ಇಂಡೀಸ್‌ನ ಆ್ಯಂಟಿಗುವಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮುಖಕ್ಕೆ ಗಾಯವಾಗಿ ಬ್ಯಾಂಡೇಜ್ ಹಾಕಿಕೊಂಡಿದ್ದರೂ ಬೌಲಿಂಗ್ ಮಾಡಿ ಕ್ರೀಡಾಸ್ಫೂರ್ತಿ ಮೆರೆದಿದ್ದರು. ಕುಂಬ್ಳೆಯ ಈ ಸಾಹಸ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ದಕ್ಷಿಣ ಆಫ್ರಿಕದ ಮಾಜಿ ಆರಂಭಿಕ ಆಟಗಾರ ಗ್ರೇಮ್ ಸ್ಮಿತ್ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೈಬೆರಳಿನ ಮುರಿತಕ್ಕೊಳಗಾದರೂ ಬ್ಯಾಟಿಂಗ್ ಮುಂದುವರಿಸಿ ತಂಡ ಪಂದ್ಯ ಡ್ರಾಗೊಳಿಸಲು ನೆರವಾಗಿದ್ದರು.







