ಬ್ಯಾಂಕ್ ಭದ್ರತೆಗಾಗಿ ಖಾಸಗಿ ಸೆಕ್ಯೂರಿಟಿಗಳನ್ನು ನೇಮಿಸಿಕೊಳ್ಳಿ: ಎಸ್ಪಿ ರವಿ ಡಿ.ಚನ್ನಣ್ಣನವರ್

ಮೈಸೂರು,ಫೆ.5: ಬ್ಯಾಂಕ್ ಗಳ ಭದ್ರತೆಗೆ ಪೊಲೀಸರ ನಿಯೋಜನೆ ಸ್ವಲ್ಪ ಕಷ್ಟವೇ. ಅದಕ್ಕಾಗಿ ನೀವೇ ಪ್ರೈವೇಟ್ ಏಜೆನ್ಸಿಗಳ ಮೂಲಕ ಬ್ಯಾಂಕ್ ಭದ್ರತೆಗೆ ಸೆಕ್ಯೂರಿಟಿಗಳನ್ನು ನೇಮಿಸಿಕೊಳ್ಳಿ. ಇದರಿಂದ ಬ್ಯಾಂಕ್ ಭದ್ರತೆಗೂ ಅನುಕೂಲವಾಗಲಿದೆ ಎಂದು ಬ್ಯಾಂಕ್ ಮ್ಯಾನೇಜರ್ ಗಳಿಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಸಲಹೆ ನೀಡಿದರು.
ಸೋಮವಾರ ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಲ್ಲ ಬ್ಯಾಂಕ್ ಮ್ಯಾನೇಜರ್ ಗಳ ಸಭೆ ಕರೆದು ಅವರಿಂದ ಮಾಹಿತಿ ಪಡೆದರಲ್ಲದೇ ಹಲವು ಸೂಚನೆಗಳನ್ನು ನೀಡಿದರು. ಬ್ಯಾಂಕ್ ನಲ್ಲಿ ಹಣ ಆಭರಣಗಳನ್ನು ಇರಿಸಿದರೆ ಜನರು ತಮ್ಮ ಸ್ವತ್ತುಗಳು ಭದ್ರವಾಗಿರುತ್ತವೆ ಎಂದು ತಿಳಿದಿರುತ್ತಾರೆ. ಅದಕ್ಕಾಗಿ ಕಳ್ಳತನ, ದರೋಡೆಗಳು ನಡೆಯದಂತೆ ಯಾವ ರೀತಿ ಭದ್ರತೆಗಳನ್ನು ಬ್ಯಾಂಕ್ ಗಳಿಗೆ ಒದಗಿಸಿದ್ದೀರಿ ಎಂದು ಕೇಳಿ ಮಾಹಿತಿ ಪಡೆದರು. ಪೊಲೀಸರು ಎಲ್ಲ ಬ್ಯಾಂಕ್ ಗಳತ್ತಲೂ ಪದೇ ಪದೇ ತೆರಳಿ ಗಮನ ಹರಿಸಲಾಗುವುದಿಲ್ಲ. ಹಾಗಂತ ಬರುವುದಿಲ್ಲವೆಂದಲ್ಲ. ಅವರು ಯಾವಾಗ ಎಷ್ಟೊತ್ತಿಗೆ ಬರುತ್ತಾರೆಂದು ಹೇಳಲಾಗದು. ಹೀಗಾಗಿ ನೀವೇ ಖಾಸಗಿ ಏಜೆನ್ಸಿಗಳ ಮೂಲಕ ಬ್ಯಾಂಕ್ ಗೆ ಸೆಕ್ಯೂರಿಟಿಯನ್ನು ನಿಯೋಜಿಸಿ ಎಂದು ತಿಳಿಸಿದರು.
ಬ್ಯಾಂಕ್ ಮ್ಯಾನೇಜರ್ ಗಳು, ಮೊದಲೆಲ್ಲ ಬ್ಯಾಂಕ್ ಮುಂದೆ ನೋಟ್ ಬುಕ್ ಒಂದನ್ನು ಇಡಲಾಗುತ್ತಿದ್ದು, ಪೊಲೀಸರು ಬಂದಾಗ ಅದರ ಮೇಲೆ ಸಹಿ ಹಾಕಿ ಹೋಗುತ್ತಿದ್ದರು. ಈಗ ಆ ಪದ್ಧತಿಗಳು ಇಲ್ಲ. ಪೊಲೀಸರು ಬರುತ್ತಾರಾ, ಇಲ್ಲವಾ ಎಂದು ತಿಳಿಯುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಎಸ್ಪಿ ಚನ್ನಣ್ಣನವರ್, ಪೊಲೀಸರು ಬರುತ್ತಾರೆ. ಆದರೆ ಪೊಲೀಸರು ಬರುವುದು ತಿಳಿಯುವುದಿಲ್ಲ. ಅಕಸ್ಮಾತ್ ಅಲ್ಲಿ ಅಪರಾಧಿಗಳಿದ್ದರೆ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ , ಅದರಿಂದ ಜಾಗೃತರಾಗಿದ್ದೇವೆ ಎಂದರು.
ಬ್ಯಾಂಕ್ ಮ್ಯಾನೇಜರ್ ಗಳು ಹಣಗಳನ್ನು ಯಾರು ಎಟಿಎಂ ಗಳಿಗೆ ಹಾಕುತ್ತಿದ್ದಾರೆ, ಅವರ ಕುರಿತು ಸರಿಯಾದ ಮಾಹಿತಿಯನ್ನು ಪಡೆದುಕೊಂಡಿರಿ. ಅಷ್ಟೇ ಅಲ್ಲದೇ ಖಾಸಗಿ ಏಜೆನ್ಸಿಗಳ ಮೂಲಕ ಬರುವ ಸೆಕ್ಯೂರಿಟಿಗಳು ಯಾರು? ಅವರು ಹಿಂದೆ ಏನು ಮಾಡಿಕೊಂಡಿದ್ದರು ಎಂಬುವುದರ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ, ಸಮೀಪದ ಠಾಣೆಗೂ ಅವರ ವಿವರವನ್ನು ನೀಡಿ ಎಂದು ತಿಳಿಸಿದರು.
ಈ ಸಂದರ್ಭ ಅಡಿಶನಲ್ ಎಸ್ಪಿ ರುದ್ರಮುನಿ ಉಪಸ್ಥಿತರಿದ್ದರು.







