ಮುಸ್ಲಿಮರ ವಿರುದ್ಧ ದ್ವೇಷ ಹರಡಬೇಡಿ: ಗೆಳತಿಯ ಕುಟುಂಬಸ್ಥರಿಂದ ಕೊಲೆಯಾದ ಅಂಕಿತ್ ತಂದೆಯ ಮನವಿ
“ನನ್ನ ಪುತ್ರನ ಕೊಲೆಗೆ ಧಾರ್ಮಿಕ ಬಣ್ಣ ನೀಡಬೇಡಿ”

ಹೊಸದಿಲ್ಲಿ, ಫೆ.5: “ನನ್ನ ಪುತ್ರನ ಕೊಲೆಗೆ ಧಾರ್ಮಿಕ ಬಣ್ಣ ನೀಡಬೇಡಿ” ಎಂದು ಗೆಳತಿಯ ಕುಟುಂಬಸ್ಥರಿಂದ ಹತ್ಯೆಯಾದ 23 ವರ್ಷದ ಯುವಕ ಅಂಕಿತ್ ಸಕ್ಸೇನಾರ ತಂದೆ ಯಶ್ಪಾಲ್ ಸಕ್ಸೇನಾ ಹೇಳಿದ್ದಾರೆ.
“ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲು ನಾನು ಬಯಸುವುದಿಲ್ಲ. ನಡೆದ ಘಟನೆಯಿಂದ ನಾನು ದುಃಖದಲ್ಲಿದ್ದೇನೆ. ಆದರೆ ಮುಸ್ಲಿಮರ ವಿರುದ್ಧ ಯಾರೂ ದ್ವೇಷ ವಾತಾವರಣ ಸೃಷ್ಟಿಸುವುದನ್ನು ನಾನು ಬಯಸುವುದಿಲ್ಲ. ನಾನು ಯಾವುದೇ ಧರ್ಮದ ವಿರುದ್ಧವಿಲ್ಲ” ಎಂದು ಯಶ್ಪಾಲ್ ಹೇಳಿದ್ದಾರೆ.
“ನನ್ನ ಪುತ್ರನ ಕೊಲೆಗಾಗಿ ಎಲ್ಲಾ ಮುಸ್ಲಿಮರನ್ನು ಆರೋಪಿಸಬಾರದು. ಕೋಮುದ್ವೇಷ ಹರಡಲು ನನ್ನನ್ನು ಬಳಸಬೇಡಿ. ಈ ಘಟನೆಯನ್ನು ಧರ್ಮದೊಂದಿಗೆ ತಳುಕು ಹಾಕಬೇಡಿ ಎಂದು ನಾನು ಎಲ್ಲರೊಂದಿಗೂ ವಿನಂತಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಗುರುವಾರ ಸಂಜೆ ಪಶ್ಚಿಮ ದಿಲ್ಲಿಯ ರಸ್ತೆ ಬದಿ ಅಂಕಿತ್ ಗೆ ಆತನ ಗೆಳತಿಯ ಮನೆಯವರು ಹಾಗು ಕುಟುಂಬಸ್ಥರು ಇರಿದಿದ್ದರು. ಗಂಭಿರವಾಗಿ ಗಾಯಗೊಂಡಿದ್ದ ಅಂಕಿತ್ ನಂತರ ಮೃತಪಟ್ಟಿದ್ದರು. ಈ ಘಟನೆಯ ನಂತರ ಸಾಮಾಜಿಕ ಜಾಲತಾಣದ ಮೂಲಕ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಕೆಲಸವನ್ನು ಕೆಲ ದುಷ್ಕರ್ಮಿಗಳು ಮಾಡಿದ್ದರು.





