ಮಂಗಳೂರು: ಫೆ. 7 ರಿಂದ ಯುವ ರೆಡ್‌ಕ್ರಾಸ್ ಸ್ವಯಂಸೇವಕರಿಗೆ ತರಬೇತಿ ಶಿಬಿರ
ಮಂಗಳೂರು, ಫೆ. 5: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಶಾಖೆ, ಯೂತ್ ರೆಡ್‌ಕ್ರಾಸ್ ಉಪಸಮಿತಿ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಯೂತ್ ರೆಡ್‌ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಫೆ. 7ರಿಂದ 10ರ ವರೆಗೆ ರಾಜ್ಯ ಮಟ್ಟದ ಯುವ ರೆಡ್‌ಕ್ರಾಸ್ ಸ್ವಯಂಸೇವಕರಿಗೆ ವಾರ್ಷಿಕ ತರಬೇತಿ ಶಿಬಿರವನ್ನು ಪಿಲಿಕುಲದ ಸ್ಕೌಟ್ ಗೈಡ್ಸ್ ಭವನದಲ್ಲಿ ಆಯೋಜಿಸಲಾಗಿದೆ.
ಸದ್ರಿ ತರಬೇತಿ ಶಿಬಿರಕ್ಕೆ ರಾಜ್ಯದ 14 ವಿಶ್ವವಿದ್ಯಾನಿಲಯಗಳ ಯುವ ರೆಡ್‌ಕ್ರಾಸ್ ಸ್ವಯಂಸೇವಕರು ಭಾಗವಹಿಸಲಿರುವರು. ಕಾರ್ಯಕ್ರಮವು ರೆಡ್‌ಕ್ರಾಸ್ ಕಾರ್ಯಚಟುವಟಿಕೆ, ವ್ಯಯಕ್ತಿಕ ನಿರ್ವಹಣೆ, ಕೌಶಲ್ಯ ಅಭಿವೃದ್ಧಿ, ಪ್ರಥಮ ಚಿಕಿತ್ಸೆ, ವಿಕೋಪ ನಿರ್ವಹಣೆ, ಮಾನಸಿಕ ಸ್ಥೈರ್ಯ ಮಾಹಿತಿಯನ್ನು ಒಳಗೊಂಡಿದೆ.
ಕಾರ್ಯಕ್ರಮದ ಉದ್ಘಾಟನೆಯು ಪೂರ್ವಾಹ್ನ 11:30ಕ್ಕೆ ಪಿಲಿಕುಲದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿವಿಯ ಉಪಕುಲಪತಿ ಪ್ರೊ.ಕೆ.ಬೈರಪ್ಪ, ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಸಿ.ಎ. ಶಾಂತರಾಮ ಶೆಟ್ಟಿ, ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆಶೋಕ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥಿಲ್ ಎಸ್., ಕೇಂದ್ರ ಅಬಕಾರಿ ಸೇವಾ ತೆರಿಗೆಯ ಆಯುಕ್ತ ಡಾ. ಎಂ. ಸುಬ್ರಹ್ಮಣ್ಯಂ, ಜಿಲ್ಲಾ ಸ್ಕೌಟ್ ಗೈಡ್ಸ್‌ನ ಮುಖ್ಯ ಆಯುಕ್ತ ಎನ್.ಜಿ ಮೋಹನ್, ಯುವ ರೆಡ್‌ಕ್ರಾಸ್‌ನ ರಾಜ್ಯ ಸಲಹೆಗಾರ ಎಚ್.ಎಸ್.ಸುರೇಶ್, ರಾಜ್ಯ ಸಂಯೋಜಕ ಎಂ.ಎ. ಶಾಕೀಬ್ ಭಾಗವಹಿಸಲಿದ್ದಾರೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಯುವ ರೆಡ್‌ಕ್ರಾಸ್ ಸಂಯೋಜಕ ಸಚೇತ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







