ಕೊಡಿಯೇರಿ ಬಾಲಕೃಷ್ಣನ್ ಪುತ್ರನಿಗೆ ಪ್ರಯಾಣ ನಿರ್ಬಂಧ ವಿಧಿಸಿದ ದುಬೈ ಕೋರ್ಟ್
ವಂಚನೆ ಪ್ರಕರಣ

ಕೊಡಿಯೇರಿ ಬಾಲಕೃಷ್ಣನ್
ತಿರುವನಂತಪುರ,ಫೆ.5: ಕೊಲ್ಲಿಯ ಪ್ರವಾಸೋದ್ಯಮ ಕಂಪನಿಯೊಂದು ದಾಖಲಿಸಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನ ನ್ಯಾಯಾಲಯವೊಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಹಿರಿಯ ಪುತ್ರ ಬಿನೊಯ್ ಕೊಡಿಯೇರಿ ಅವರಿಗೆ ಪ್ರಯಾಣ ನಿರ್ಬಂಧವನ್ನು ವಿಧಿಸಿದೆ.
ಫೆ.1ರಂದು ಈ ನಿರ್ಬಂಧವನ್ನು ಹೇರಲಾಗಿದ್ದು, ತನ್ನ ಪಾಸ್ಪೋರ್ಟ್ನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಹಾಲಿ ದುಬೈನಲ್ಲಿರುವ ಬಿನೊಯ್ ಅವರಿಗೆ ಸೂಚಿಸಲಾಗಿದೆ. 10 ಲಕ್ಷ ದಿರ್ಹಮ್(1.74 ಕೋ.ರೂ.)ಗಳನ್ನು ನ್ಯಾಯಾಲಯದಲ್ಲಿ ಠೇವಣಿಯಿರಿಸುವಂತೆಯೂ ಅವರಿಗೆ ಆದೇಶಿಸಲಾಗಿದೆ.
ಬಿನೊಯ್ ತನಗೆ 13 ಕೋ.ರೂ.ಗಳನ್ನು ವಂಚಿಸಿದ್ದಾರೆ ಎಂದು ದುಬೈನ ಜಾಸ್ ಟೂರಿಸಂ ಆರೋಪಿಸಿದೆ. ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಬೆಳವಣಿಗೆಯನ್ನು ದೃಢಪಡಿಸಿದ ಬಾಲಕೃಷ್ಣನ್ ಅವರ ಕಿರಿಯ ಪುತ್ರ ಬಿನೀಷ್ ಅವರು, ಮುಂದಿನ ವಾರ ನಿರ್ಬಂಧದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸುವುದಾಗಿ ತಿಳಿಸಿದರು. ವಿವಾದವು 1.74 ಕೋ.ರೂ.ಪಾವತಿಗೆ ಸಂಬಂಧಿಸಿದೆಯೇ ಹೊರತು ಕಂಪನಿಯು ಆರೋಪಿಸಿರುವಂತೆ 13 ಕೋ.ರೂ.ಗಳಲ್ಲ ಎಂದರು.
ಸಿಪಿಎಂ ಜಿಲ್ಲಾ ಸಮ್ಮೇಳನವು ನಡೆಯುತ್ತಿರುವಾಗಲೇ ಉದ್ದೇಶಪೂರ್ವಕವಾಗಿ ಈ ವಿವಾದವನ್ನೆತ್ತಲಾಗಿದೆ ಎಂದ ಬಿನೀಷ್, ಬಿನೊಯ್ ದುಬೈನಲ್ಲಿಯೇ ಇರಲಿ. ಅವರು ಇಲ್ಲಿಗೆ ವಾಪಸಾಗುವ ತುರ್ತು ಅಗತ್ಯವೇನಿಲ್ಲ ಎಂದರು.
ನನ್ನ ಸೋದರ ಮತ್ತು ನಾನು ವಯಸ್ಕರಾಗಿದ್ದೇವೆ ಮತ್ತು ನಮ್ಮ ಕೃತ್ಯಗಳಿಗೆ ನಾವೇ ಹೊಣೆಗಾರರಾಗಿದ್ದೇವೆ. ನಾವೇನೇ ಮಾಡಲಿ, ಅದಕ್ಕೆ ನಮ್ಮ ತಂದೆ ಹೇಗೆ ಹೊಣೆಗಾರ ರಾಗುತ್ತಾರೆ ಎಂದು ಅವರು ಪ್ರಶ್ನಿಸಿದರು.
ದುಬೈನಲ್ಲಿ ಬಿನೊಯ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಈ ಹಿಂದೆ ಪ್ರತಿಪಾದಿಸಿದ್ದ ಬಾಲಕೃಷ್ಣನ್, ಜನರಿಗೆ ‘ತಪ್ಪು’ ವರದಿಗಳನ್ನು ನೀಡುತ್ತಿರುವುದಕ್ಕಾಗಿ ಮಾಧ್ಯಮಗಳನ್ನು ತರಾಟೆಗೆತ್ತಿಕೊಂಡಿದ್ದರು.
ಬಿನೊಯ್ ವಿರುದ್ಧದ ತನ್ನ ಆರೋಪಗಳಿಗೆ ಸಂಬಂಧಿಸಿದಂತೆ ಸೋಮವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿ ಕರೆಯಲು ಜಾಸ್ ಟೂರಿಸಂ ಉದ್ದೇಶಿಸಿತ್ತಾದರೂ, ಕರುಂಗಪಳ್ಳಿ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಿದೆ.
ವಂಚನೆ ಪ್ರಕರಣದಲ್ಲಿ ಇನ್ನೋರ್ವ ಆಡಳಿತ ಪಕ್ಷದ ಶಾಸಕರ ಪುತ್ರನೂ ಭಾಗಿಯಾಗಿ ದ್ದಾನೆ ಎನ್ನಲಾಗಿದೆ.







