ಎ.1ರಿಂದ ಮಾರಾಟವಾಗುವ ಶೇರುಗಳಿಗೆ ಮಾತ್ರ ದೀರ್ಘಕಾಲೀನ ಬಂಡವಾಳ ಗಳಿಕೆ ತೆರಿಗೆ ಅನ್ವಯ
ಹೊಸದಿಲ್ಲಿ,ಫೆ.5: ಮುಂಗಡಪತ್ರದಲ್ಲಿ ಪ್ರಸ್ತಾಪಿಸಲಾಗಿರುವ ದೀರ್ಘಕಾಲೀನ ಬಂಡವಾಳ ಗಳಿಕೆ ತೆರಿಗೆಯು 2018,ಎಪ್ರಿಲ್ 1ರಿಂದ ಮಾರಾಟವಾಗುವ ಶೇರುಗಳಿಂದ ಪ್ರಾಪ್ತ ಲಾಭಕ್ಕೆ ಅನ್ವಯಿಸಲಿದೆ ಎಂದು ಸರಕಾರವು ಸೋಮವಾರ ಸ್ಪಷ್ಟಪಡಿಸಿದೆ.
ಎ.1ರಂದು ಅಥವಾ ನಂತರ ಮಾರಾಟವಾಗುವ ಶೇರುಗಳಿಗೆ ತೆರಿಗೆಯು ಅನ್ವಯವಾಗುವುದಾದರೂ ಬಂಡವಾಳ ಗಳಿಕೆಯನ್ನು ಲೆಕ್ಕ ಹಾಕಲು ಸ್ವಾಧೀನ ಬೆಲೆಯು ವಾಸ್ತವ ಬೆಲೆಗಿಂತ ಅಧಿಕವಾಗಿರಲಿದೆ ಅಥವಾ ಜ.31ರ ಗರಿಷ್ಠ ಮಾರಾಟದ ಬೆಲೆಯಾಗಿರಲಿದೆ ಎಂದು ಅದು ತಿಳಿಸಿದೆ.
ಶೇರು ಮಾರುಕಟ್ಟೆಗಳಲ್ಲಿ ಕುಸಿತ ಸೋಮವಾರವೂ ಕುಸಿದ ಹಿನ್ನೆಲೆಯಲ್ಲಿ ಸರಕಾರವು ಹೊಸ ತೆರಿಗೆಯನ್ನು ‘ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳ’ ರೂಪದಲ್ಲಿ ವಿವರಿಸಿದೆ.
ನೂತನ ತೆರಿಗೆ ವ್ಯವಸ್ಥೆಯು 2018,ಎ.1ರಿಂದ ಜಾರಿಗೊಳ್ಳಲಿದೆ. 2018,ಫೆ.1 ಮತ್ತು ಮಾ.31ರ ನಡುವೆ ಮಾರಾಟವಾಗುವ ಶೇರುಗಳ ಮೇಲಿನ ಲಾಭಗಳಿಗೆ ವಿನಾಯಿತಿಯು ಮುಂದುವರಿಯಲಿದೆ ಎಂದು ಅದು ತಿಳಿಸಿದೆ.
ಅತ್ತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಣಕಾಸು ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು, ದುರ್ಬಲ ಜಾಗತಿಕ ಪ್ರವೃತ್ತಿ ಶೇರು ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ಕಾರಣವೇ ಹೊರತು ದೀರ್ಘಕಾಲೀನ ಬಂಡವಾಳ ಗಳಿಕೆ ತೆರಿಗೆಯಲ್ಲ ಎಂದು ಹೇಳಿದರು.
ಸೋಮವಾರವೂ ಶೇರು ಮಾರುಕಟ್ಟೆಗಳಲ್ಲಿ ಕರಡಿ ಕುಣಿತ ಮುಂದುವರಿದಿದ್ದು, ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 309 ಮತ್ತು ಎನ್ಎಸ್ಇ ಸೂಚ್ಯಂಕ ನಿಫ್ಟಿ 94 ಅಂಶಗಳಷ್ಟು ಪತನಗೊಂಡಿವೆ.