ಶಿವಮೊಗ್ಗ: ಅಕ್ರಮ ಕಲ್ಲು ಗಣಗಾರಿಕೆ ಪ್ರಶ್ನಿಸಿದ ತಂದೆ-ಮಗನ ಮೇಲೆ ಹಲ್ಲೆ; ಆರೋಪ
ಶಿವಮೊಗ್ಗ, ಫೆ. 5: ಅನದಿಕೃತ ಕಲ್ಲು ಗಣಿಗಾರಿಕೆಯಿಂದ ತೋಟದ ಬೋರ್‍ವೆಲ್‍ನಲ್ಲಿ ಅಂತರ್ಜಲ ಕುಸಿತವಾಗಿದೆ. ನೀರಿನ ಕೊರತೆಯಿಂದ ಬೆಳೆ ಹಾಳಾಗುತ್ತಿದ್ದು, ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ ತಂದೆ, ಮಗನ ಮೇಲೆ ಗಣಿಗಾರಿಕೆ ನಡೆಸುವ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಹೊರವಲಯ ದೇವಕಾತಿಕೊಪ್ಪ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಅದೇ ಗ್ರಾಮದ ಧನಂಜಯ (55) ಹಾಗೂ ಅವರ ಪುತ್ರ ರುದ್ರಯ್ಯ (35) ಹಲ್ಲೆಗೊಳಗಾದವರೆಂದು ಗುರುತಿಸಲಾಗಿದೆ. ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ: ಧನಂಜಯರವರಿಗೆ ಸೇರಿದ ಅಡಕೆ ತೋಟದ ಸಮೀಪದಲ್ಲಿಯೇ ಇತ್ತೀಚೆಗೆ ಕೆಲವರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾರಂಭಿಸಿದ್ದರು. ಸ್ಪೋಟದ ಕಾರಣದಿಂದ ತೋಟದ ಬೋರ್‍ವೆಲ್‍ನಲ್ಲಿ ಅಂತರ್ಜಲ ಕುಸಿತ ಉಂಟಾಗಿತ್ತು. ಇದರಿಂದ ತೋಟದ ಗಿಡಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ, ಗಿಡಗಳು ಒಣಗಲಾರಂಭಿಸಿದ್ದವು. ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಿದ್ದ ಜಮೀನಿನ ಮಾಲೀಕರ ಬಳಿ ಧನಂಜಯ ಹಾಗೂ ಅವರ ಪುತ್ರ ರುದ್ರಯ್ಯ ತೆರಳಿ, ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಂತೆ ಮಾತನಾಡುತ್ತಿದ್ದರು. ಈ ವೇಳೆ ಗಣಿಗಾರಿಕೆ ನಡೆಸುವ ವ್ಯಕ್ತಿ ಅಲ್ಲಿಗೆ ಆಗಮಿಸಿದ್ದು, ಇವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ನಂತರ ಅಪ್ಪ-ಮಗನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.







