ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು: ಕೆ.ಎಸ್.ನಂಜುಂಡೇಗೌಡ
ಮಡಿವಾಳರ ನಡಿಗೆ- ಸ್ವಾಭಿಮಾನದ ಕಡೆಗೆ ಜಾಗೃತಿ ಕಾರ್ಯಕ್ರಮ

ಮಂಡ್ಯ, ಫೆ.5: ಚುನಾವಣೆ ಬಂದಾಗ ಮಾತ್ರ ಸಮುದಾಯದವರಿಗೆ ಭರವಸೆಗಳ ಬುತ್ತಿ ನೀಡುವ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಗಳು ಅವರ ಅಭಿವೃದ್ಧಿಗೆ ಶ್ರಮಿಸುವುದಿಲ್ಲ. ಪರಿಣಾಮ ವರ್ಷದಿಂದ ವರ್ಷಕ್ಕೆ ಸಮುದಾಯದ ಸಂಕಷ್ಟಗಳು ಹೆಚ್ಚುತ್ತಲೇ ಇವೆ ಎಂದು ಬಿಜೆಪಿ ಮುಖಂಡ ಕೆ.ಎಸ್.ನಂಜುಂಡೇಗೌಡ ವಿಷಾದಿಸಿದ್ದಾರೆ.
ನಗರದ ಗಾಂಭವನದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವರ ಸಂಘ ಹಾಗೂ ಜಿಲ್ಲಾ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ನಡೆದ ಮಡಿವಾಳರ ನಡಿಗೆ-ಸ್ವಾಭಿಮಾನದ ಕಡೆಗೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯಗಳ ಕಷ್ಟಗಳನ್ನು ಅರಿತು ಕೆಲಸ ಮಾಡುವ ಗುರುತರ ಜವಾಬ್ದಾರಿ ಸರಕಾರದ ಮೇಲಿದೆ ಎಂದರು.
ವಚನಗಳನ್ನು ನಾಶ ಮಾಡುವುದರ ವಿರುದ್ಧ ಉಗ್ರ ಧ್ವನಿ ಎತ್ತಿದವರು ಮಡಿವಾಳ ಮಾಚಿದೇವ. ಅದೇ ರೀತಿ ಅನ್ಯಾಯದ ವಿರುದ್ಧ ಪ್ರತಿಭಟನೆಯ ಧ್ವನಿಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು. ಇಲ್ಲವಾದರೆ ಕಷ್ಟದ ಜೀವನವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಹಿಂದುಳಿದ, ಸೂಕ್ಷ್ಮ ಸಮುದಾಯಗಳು ಯಾವುದೇ ಒಂದು ಪಕ್ಷದ ಪರವಾಗಿದ್ದರೆ ಏಳಿಗೆ ಸಾಧ್ಯವಿಲ್ಲ. ಪಕ್ಷಾತೀತವಾಗಿದ್ದುಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ನಡಿಗೆ ಸ್ವಾಭಿಮಾನದೊಂದಿಗೆ ಸಮಸಮಾಜ ನಿರ್ಮಾಣ ಹಾಗೂ ಸಾಮಾಜಿಕ ನ್ಯಾಯದ ಕಡೆಗೆ ಇರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಡಿವಾಳ ಸಮುದಾಯದ ಹಲವು ಮುಖಂಡರನ್ನು ಸನ್ಮಾನಿಸಲಾಯಿತು. ಜಿಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಎಪಿಎಂಸಿ ಅಧ್ಯಕ್ಷೆ ಪಲ್ಲವಿ, ನಗರ ಬಿಜೆಪಿ ಅಧ್ಯಕ್ಷ ಅಚ್.ಆರ್.ಅರವಿಂದ್, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಜಯರಾಮು, ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ಗುರುರಾಜ್, ಚಿಕ್ಕವೀರಶೆಟ್ಟಿ, ಸಿ.ಸಿದ್ದಶೆಟ್ಟಿ, ಎಚ್.ಎಸ್. ಹನುಮಂತಯ್ಯ, ರಮೇಶ್, ಗೀತಾ ಶಿವಾರ, ಪುಟ್ಟಸ್ವಾಮಿ, ರವಿಕಾಂತ್, ವೆಂಕಟರಾಮು, ಗೋಪಾಲ್, ಇತರರು ಉಪಸ್ಥಿತರಿದ್ದರು.







