ಮಾಲ್ಡೀವ್ಸ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಮಾಲೆ,ಫೆ.5: ಪ್ರತಿಪಕ್ಷ ನಾಯಕರನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಮಾಲ್ದೀವ್ಸ್‌ನ ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಆದೇಶಿಸಿದ ಬಳಿಕ ಈ ದ್ವೀಪರಾಷ್ಟ್ರದಲ್ಲಿ ತೀವ್ರಗೊಳ್ಳುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಅಧ್ಯಕ್ಷ ಅಬುಲ್ಲಾ ಯಮೀನ್ ಅವರು ಸೋಮವಾರ 15 ದಿನಗಳ ಅವಧಿಗೆ ತುರ್ತು ಸ್ಥಿತಿಯನ್ನು ಘೋಷಿಸಿದ್ದಾರೆ.
ಈ ಅವಧಿಯಲ್ಲಿ ಕೆಲವು ಹಕ್ಕುಗಳನ್ನು ನಿರ್ಬಂಧಿಸಲಾಗುವುದಾದರೂ ಸಾಮಾನ್ಯ ಚಟುವಟಿಕೆಗಳು, ಸೇವೆಗಳು ಮತ್ತು ಉದ್ಯಮಗಳಿಗೆ ಯಾವುದೇ ತೊಂದರೆಯಾ ಗುವುದಿಲ್ಲ. ಮಾಲ್ದೀವ್ಸ್‌ನ ಎಲ್ಲ ಪ್ರಜೆಗಳು ಮತ್ತು ಈ ದೇಶದಲ್ಲಿ ವಾಸವಿರುವ ಹಾಗೂ ಇಲ್ಲಿಗೆ ಭೇಟಿ ನೀಡಿರುವ ವಿದೇಶಿಯರ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಪ್ರಜೆಗಳಿಗೆ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ಭರವಸೆಯನ್ನು ನೀಡಲು ಸರಕಾರವು ಬಯಸಿದೆ ಎಂದು ಅಧ್ಯಕ್ಷರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ
ತುರ್ತು ಸ್ಥಿತಿಯು ಶಂಕಿತ ವ್ಯಕ್ತಿಗಳನ್ನು ಬಂಧಿಸಲು ಭದ್ರತಾ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ ಎಂದು ಮೂಲಗಳು ತಿಳಿಸಿವೆ. ದೇಶಭ್ರಷ್ಟ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಸೇರಿದಂತೆ ಒಂಭತ್ತು ಪ್ರತಿಪಕ್ಷ ನಾಯಕರ ಬಿಡುಗಡೆಗೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಐದು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಉಚ್ಚಾಟಿಸಲಾಗಿದ್ದ 12 ಸಂಸದರ ಸದಸ್ಯತ್ವ ಮರುಸ್ಥಾಪನೆಗೂ ನ್ಯಾಯಾಲಯವು ಆದೇಶಿಸಿತ್ತು.
ತುರ್ತು ಸ್ಥಿತಿಯ ಘೋಷಣೆಯು ಯಮೀನ್ ಅವರ ಹತಾಶೆಯ ಪ್ರತೀಕವಾಗಿದೆ. ಅದು ಕೇವಲ ಜನತೆಯ ಮತ್ತು ಸ್ವತಂತ್ರ ಸಂಸ್ಥೆಗಳ ವಿಶ್ವಾಸಕ್ಕೆ ಎರವಾಗಿರುವ ಪ್ರತ್ಯೇಕಿತ ವ್ಯಕ್ತಿಯನ್ನು ತೋರಿಸುತ್ತಿದೆ ಎಂದು ಸಂಸದೆ ಹಾಗೂ ಪ್ರತಿಪಕ್ಷ ಮಾಲ್ದಿವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸದಸ್ಯೆ ಇವಾ ಅಬುಲ್ಲಾ ಹೇಳಿದರು.
ಎರಡನೇ ಬಾರಿ ತುರ್ತು ಸ್ಥಿತಿ
ಯಮೀನ್ ಅವರು ದೇಶದಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಿರುವುದು ಇದು ಎರಡನೇ ಬಾರಿಯಾಗಿದೆ. 2015 ನವೆಂಬರ್‌ನಲ್ಲಿ ತನ್ನ ಹತ್ಯೆಗೆ ಯತ್ನ ನಡೆದ ಬಳಿಕ ಅವರು ಮೊದಲ ಬಾರಿ ತುರ್ತು ಸ್ಥಿತಿಯನ್ನು ಘೋಷಿಸಿದ್ದರು.
ಅಧ್ಯಕ್ಷರು ತುರ್ತು ಸ್ಥಿತಿಯ ಯಾವುದೇ ಘೋಷಣೆಯ ಕುರಿತು ಎರಡು ದಿನಗಳೊಳಗೆ ಸಂಸತ್ತಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ, ಆದರೆ ದೇಶದ ಶಾಸಕಾಂಗವನ್ನು ಅನಿರ್ದಿಷ್ಟಾವಧಿಗೆ ಅಮಾನತಿನಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯವು ಗುರುವಾರ ಯಮೀನ್ ಪಕ್ಷದಿಂದ ಪಕ್ಷಾಂತರಗೊಂಡಿದ್ದ 12 ಸದಸ್ಯರ ಸ್ಥಾನಗಳನ್ನು ಮರು ಊರ್ಜಿತಗೊಳಿಸಿತ್ತು . ಇದರ ಪರಿಣಾಮವಾಗಿ 85 ಸದಸ್ಯ ಬಲದ ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಬಹುಮತದ ಅವಕಾಶ ಲಭಿಸಿತ್ತು ಮತ್ತು ಅಧ್ಯಕ್ಷರ ವಾಗ್ದಂಡನೆಗೆ ಮಾರ್ಗವು ಸುಲಭಗೊಂಡಿತ್ತು.







