ಇದ್ಲಿಬ್ ಮೇಲೆ ರಶ್ಯ ಯುದ್ಧ ವಿಮಾನಗಳ ದಾಳಿ ತೀವ್ರ

ಅಮ್ಮಾನ್ (ಜೋರ್ಡಾನ್), ಫೆ. 5: ಸಿರಿಯದ ಉತ್ತರದ ಪ್ರಾಂತ ಇದ್ಲಿಬ್‌ನಲ್ಲಿ ಬಂಡುಕೋರರು ರಶ್ಯದ ಯುದ್ಧವಿಮಾನವನ್ನು ಉರುಳಿಸಿ ಅದರ ಪೈಲಟ್‌ನನ್ನು ಕೊಂದ ಒಂದು ದಿನದ ಬಳಿಕ, ಆ ಪ್ರಾಂತದಲ್ಲಿನ ಬಂಡುಕೋರ ನಿಯಂತ್ರಣದ ಪಟ್ಟಣಗಳು ಮತ್ತು ನಗರಗಳ ಮೇಲಿನ ದಾಳಿಗಳನ್ನು ರಶ್ಯದ ಯುದ್ಧವಿಮಾನಗಳು ತೀವ್ರಗೊಳಿಸಿವೆ.
ಕಫರ್ ನುಬಲ್ ಮತ್ತು ಮಾಸ್ರನ್ ಪಟ್ಟಣಗಳು ಹಾಗೂ ಸರಕೇಬ್, ಮಾರತ್ ಅಲ್ ನುಮನ್ ಮತ್ತು ಇದ್ಲಿಬ್ ನಗರಗಳ ಮೇಲೆ ವಾಯು ದಾಳಿಗಳನ್ನು ನಡೆಸಲಾಗಿದೆ ಎಂದು ನಾಗರಿಕ ರಕ್ಷಣಾ ಮೂಲಗಳು ತಿಳಿಸಿವೆ. ಈ ದಾಳಿಗಳಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಹತ್ತಾರು ಮಂದಿ ಗಾಯಗೊಂಡಿದ್ದಾರೆ.
ಮಾರತ್ ಅಲ್ ನೂಮನ್‌ನಲ್ಲಿ ಆಸ್ಪತ್ರೆಯೊಂದರ ಮೇಲೆ ದಾಳಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ನಿವಾಸಿಗಳು ಹೇಳಿದ್ದಾರೆ.
ಕಫರ್ ನುಬಲ್‌ನಲ್ಲಿ ವಸತಿ ಕಟ್ಟಡವೊಂದರ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಧ್ವಂಸಗೊಂಡ ಆಸ್ಪತ್ರೆ ಕಟ್ಟಡದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳಡಿ ಸಿಕ್ಕಿಕೊಂಡವರನ್ನು ರಕ್ಷಿಸಲಾಗುತ್ತಿದೆ. ಹಲವಾರು ಶಿಶುಗಳನ್ನೂ ಅವಶೇಷಗಳಡಿಯಿಂದ ಹೊರದೆಗೆಯಲಾಗಿದೆ.
ಇದ್ಲಿಬ್ ಪ್ರಾಂತದ ರಾಜಧಾನಿ ಇದ್ಲಿಬ್ ನಗರದಲ್ಲಿ 5 ಮಹಡಿಗಳ ಕಟ್ಟಡವೊಂದು ಕುಸಿದಿದ್ದು, ಕನಿಷ್ಠ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.







