ಮಂಗಳೂರು: ಹಲವು ಪ್ರಕರಣಗಳ ಆರೋಪಿ ಸೆರೆ

ಮಂಗಳೂರು, ಫೆ. 5: ಒಂಟಿ ಮಹಿಳೆಯಿದ್ದ ಮನೆಯೊಳಗೆ ನುಗ್ಗಿ ಆಕೆಯನ್ನು ಬೆದರಿಸಿ ಚಿನ್ನದ ಸರ ದರೋಡೆಗೈದು ತಲೆಮರೆಸಿಕೊಂಡಿದ್ದ ರೌಡಿಶೀಟರ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಸುಂದರಿಭಾಗ್ ನಿವಾಸಿ ರಮೀಝ್ ಯಾನೆ ಲೆಮನ್ ಟೀ ರಮೀಝ್ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಹಲವಾರು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ. 1 ರಂದು ಉಳ್ಳಾಲ ಠಾಣೆ ವ್ಯಾಪ್ತಿಯ ಸುಭಾಷನಗರದ ಪುಷ್ಪ ರೆಡ್ಡಿ (70) ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ಆರೋಪಿ ಮತ್ತು ತಂಡ ಮನೆಯೊಳಗೆ ನುಗ್ಗಿ ವೃದ್ಧ ಮಹಿಳೆಯನ್ನು ಬೆದರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದರೋಡೆಗೈದು ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ರಮೀಝ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಸುಲಿಗೆ ಮತ್ತು ಕಳವು ಪ್ರಕರಣಗಳಿವೆ. ಆರೋಪಿಗಳು ದರೋಡೆಗೈದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





