ಹುಳಿಯಾರು: ಎಸ್‍ಬಿಐ ಸೇವಾ ಕೇಂದ್ರದಲ್ಲಿ ಹಣ ದುರ್ಬಳಕೆ ಆರೋಪ; ಕೇಂದ್ರ ಮುಚ್ಚಿಸಿದ ಗ್ರಾಹಕರು

ಹುಳಿಯಾರು,ಫೆ.05: ಹುಳಿಯಾರಿನ ಎಸ್‍ಬಿಐ ಗ್ರಾಹಕರ ಸೇವಾ ಕೇಂದ್ರದಲ್ಲಿ ಹಣ ದುರ್ಬಳಕೆಯ ಆರೋಪ ಕೇಳಿ ಬಂದಿದ್ದು, ಪೊಲೀಸರ ಸಮ್ಮುಖದಲ್ಲೇ ಗ್ರಾಹಕರು ಕೇಂದ್ರ ಮುಚ್ಚಿಸಿದ ಘಟನೆ ಸೋಮವಾರ ಜರುಗಿದೆ.
ಹುಳಿಯಾರಿನ ಎಸ್‍ಬಿಐ ಶಾಖೆಯಲ್ಲಿನ ವ್ಯವಹಾರದ ಒತ್ತಡ ಕಡಿಮೆ ಮಾಡಿ ಗ್ರಾಹಕರಿಗೆ ವರ್ಷದ 365 ದಿನಗಳೂ ಸುಲಭ ಹಾಗೂ ಸುಲಲಿತ ಬ್ಯಾಂಕ್ ಸೇವೆ ನೀಡುವ ಸಲುವಾಗಿ ಎಸ್‍ಬಿಐ ಎದುರಿನಲ್ಲೇ ಗ್ರಾಹಕರ ಸೇವಾ ಕೇಂದ್ರ ತೆರೆಯಲಾಗಿತ್ತು. ಇಲ್ಲಿ ಗರಿಷ್ಠ 20 ಸಾವಿರ ರೂ. ವರೆಗೂ ಹಣ ಕಟ್ಟುವ ಮತ್ತು ಪಡೆಯುವ ಸೇವೆ ನೀಡಲಾಗುತ್ತಿತ್ತು.
ವರ್ಷಕ್ಕೂ ಹೆಚ್ಚು ಕಾಲದಿಂದ ಉತ್ತಮ ವ್ಯವಹಾರ ನಡೆಸುತ್ತಿದ್ದ ಈ ಕೇಂದ್ರದಲ್ಲಿ ಕಳೆದ ಒಂದೆರಡು ತಿಂಗಳಿಂದ ಹಣ ದುರ್ಬಳಕೆಯ ಆರೋಪ ಕೇಳಿ ಬಂದಿತ್ತು. ಆಗ ಎಸ್‍ಬಿಐ ಮ್ಯಾನೇಜರ್ ಅವರೇ ಖುದ್ದು ಕೇಂದ್ರಕ್ಕೆ ಭೇಟಿ ನೀಡಿ ಸೇವಾ ಪ್ರತಿನಿಧಿಯಿಂದ ಗ್ರಾಹಕರಿಗೆ ಹಣ ಹಿಂದಿರುಗಿಸುತ್ತಿದ್ದರು. ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಎಂದು ಸೇವಾ ಪ್ರತಿನಿಧಿ ಸಬೂಬು ಹೇಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಆರೋಪ ಬಹಳವಾಗಿ ಕೇಳಿ ಬರುತ್ತಿದ್ದು, ಸೋಮವಾರ ವಂಚನೆಗೊಳಗಾದ ಗ್ರಾಹಕರು ಸೇವಾ ಕೇಂದ್ರದ ಬಳಿ ಜಮಾವಣೆಗೊಂಡರು. ಕೆಲವರು ಶನಿವಾರ ಹಣ ಪಾವತಿಗೆ ಹಣ ಕೊಟ್ಟಿದ್ದರೂ ಇನ್ನೂ ಖಾತೆಗೆ ಜಮೆ ಆಗಿಲ್ಲ ಎಂದು, ಕೆಲವರು ನಮ್ಮ ಖಾತೆಯ ಹಣ ನಮ್ಮ ಅನುಮತಿಯಿಲ್ಲದೆ ಬೇರೆಯವರ ಖಾತೆಗೆ ವರ್ಗಾವಣೆಯಾಗಿದೆ ಎಂದು ಆರೋಪಿಸಿ ಸೇವಾ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಹಕರ ಅಹವಾಲು ಆಲಿಸಿ ಸೇವಾಪ್ರತಿನಿಧಿಗೆ ಈ ಬಗ್ಗೆ ಸ್ಪಷ್ಟನೆ ಕೇಳಿದರೆ ಎಂದಿನಂತೆ ಸರ್ವರ್ ಸಮಸ್ಯೆಯಿಂದ ಈ ರೀತಿಯಾಗಿದೆ. ಸರಿಪಡಿಸುವ ಭರವಸೆ ನೀಡಿದರು. ಇದರಿಂದ ಆಕ್ರೋಶಗೊಂಡ ಗ್ರಾಹಕರು ಇಲ್ಲಿ ಹಣ ದುರ್ಬಳಕೆ ನಿರಂತವಾಗಿದ್ದು, ಪ್ರತಿ ಬಾರಿಯೂ ಸರ್ವರ್ ಸಮಸ್ಯೆಯೆಂದು ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇಲ್ಲಿನ ಗ್ರಾಹಕರ ಸೇವಾ ಕೇಂದ್ರ ಮುಚ್ಚಿಸುವಂತೆ ಪಟ್ಟು ಹಿಡಿದರು.
ಇದೇ ವೆಳೆ ಎಸ್‍ಬಿಐ ಮ್ಯಾನೇಜರ್ ಅವನ್ನು ಕರೆಸಿ ಸಮಸ್ಯೆಯ ಬಗ್ಗೆ ವಿಚಾರಿಸಿ, ಇಲ್ಲಿ ಹಣ ವ್ಯತ್ಯಾಸವಾಗುತ್ತಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಅರಿಯುವ ವರೆಗೂ ಕೇಂದ್ರ ಮುಚ್ಚಲು ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಆದರೆ ಮೇಲಧಿಕಾರಿಗಳ ಆದೇಶ ಪತ್ರ ಸ್ವೀಕರಿಸದೆ ಕೇಂದ್ರ ಮುಂದುವರಿಸುತ್ತಿದ್ದಾರೆ ಎಂದರು. ಈ ವೇಳೆ ಗ್ರಾಹಕರು ಕೇಂದ್ರ ಮುಚ್ಚಿಸುವಂತೆ ಒತ್ತಡ ಏರಿದರು. ಪರಿಣಾಮ ತನಿಖೆ ಮುಗಿಯುವವರೆಗೂ ಕೇಂದ್ರ ನಡೆಸದಂತೆ ಬಾಗಿಲು ಮುಚ್ಚಿಸಲಾಯಿತು.







