‘ಕ್ಷೀರ ಪಥ’ ಆಕಾಶಗಂಗೆಯ ಹೊರಗೂ ಗ್ರಹಗಳು
ಮೊದಲ ಬಾರಿಗೆ ಪತ್ತೆ

ವಾಶಿಂಗ್ಟನ್, ಫೆ. 5: ಖಗೋಳ ವಿಜ್ಞಾನಿಗಳು ‘ನಾಸಾ’ದ ‘ಚಂದ್ರ ಎಕ್ಸ್-ರೇ ವೀಕ್ಷಣಾಲಯ’ದ ಮಾಹಿತಿಗಳನ್ನು ಬಳಸಿ ನಮ್ಮ ‘ಕ್ಷೀರ ಪಥ’ (ಮಿಲ್ಕಿ ವೇ) ಆಕಾಶಗಂಗೆ (ಗೆಲಾಕ್ಸಿ)ಯ ಹೊರಗೂ ಗ್ರಹಗಳು ಇರುವುದನ್ನು ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.
ಕ್ಷೀರ ಪಥಕ್ಕೆ ಹೊರತಾದ ಆಕಾಶಗಂಗೆಯಲ್ಲಿ ಚಂದ್ರನಿಂದ ಹಿಡಿದು ಗುರು ಗ್ರಹದವರೆಗಿನ ದ್ರವ್ಯರಾಶಿಗಳ ಕಾಯಗಳು ಇರುವುದನ್ನು ಅಮೆರಿಕದ ಓಕ್ಲಹೋಮ ವಿಶ್ವವಿದ್ಯಾನಿಲಯದ ಸಂಶೋಧಕರು ಮೈಕ್ರೊಲೆನ್ಸಿಂಗ್ ವಿಧಾನದಿಂದ ಪತ್ತೆಹಚ್ಚಿದ್ದಾರೆ.
ನಾಸಾದ ಚಂದ್ರ ಎಕ್ಸ್‌ರೇ ವೀಕ್ಷಣಾಲಯ, ಅಂದರೆ ಬಾಹ್ಯಾಕಾಶದಲ್ಲಿರುವ ಟೆಲಿಸ್ಕೋಪ್‌ನಿಂದ ಪಡೆದ ಮಾಹಿತಿಯ ಆಧಾರದಲ್ಲಿ ಪ್ರೊಫೆಸರ್ ಕ್ಸಿನ್ಯು ಡೈ ಮತ್ತು ಎಡ್ವರ್ಡೊ ಗೆರಸ್ ಈ ಸಂಶೋಧನೆ ನಡೆಸಿದ್ದಾರೆ.
‘‘ಈ ಸಂಶೋಧನೆಯ ಬಗ್ಗೆ ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಆಕಾಶಗಂಗೆ (ಕ್ಷೀರ ಪಥ)ಯ ಹೊರಗೆ ಗ್ರಹಗಳ ಅಸ್ತಿತ್ವವಿರುವುದು ಇದೇ ಮೊದಲ ಬಾರಿಗೆ ಹೊರಗೆ ಬಂದಿದೆ’’ ಎಂದು ಡೈ ಹೇಳಿದರು.
ಈ ಅಧ್ಯಯನವು ‘ದಿ ಆ್ಯಸ್ಟ್ರೊಫಿಸಿಕಲ್ ಜರ್ನಲ್ ಲೆಟರ್ಸ್’ನಲ್ಲಿ ಪ್ರಕಟಗೊಂಡಿದೆ.
ದೂರದರ್ಶಕದಿಂದ ನೇರವಾಗಿ ವೀಕ್ಷಿಸಲು ಸಾಧ್ಯವೇ ಇಲ್ಲ
‘‘ಹೊರಗಿನ ಆಕಾಶಗಂಗೆಯು 380 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಈ ಗ್ರಹಗಳನ್ನು ನೇರವಾಗಿ ವೀಕ್ಷಿಸಲು ಅವಕಾಶವೇ ಇಲ್ಲ. ಎಷ್ಟೇ ಪ್ರಬಲ ದೂರದರ್ಶಕದಿಂದಲೂ ಇವುಗಳನ್ನು ಭೂಮಿಯಿಂದ ವೀಕ್ಷಿಸಲು ಸಾಧ್ಯವಿಲ್ಲ’’ ಎಂದು ಗೆರಸ್ ಹೇಳುತ್ತಾರೆ.
‘‘ಆದಾಗ್ಯೂ, ನಮಗೆ ಅವುಗಳ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗಿದೆ. ಅವುಗಳ ಅಸ್ತಿತ್ವವನ್ನು ಬಹಿರಂಗಪಡಿಸಿದ್ದೇವೆ. ಅವುಗಳ ದ್ರವ್ಯರಾಶಿಗಳ ಕಲ್ಪನೆಯೂ ಇದೆ. ಇದು ಅತ್ಯಂತ ಸುಧಾರಿತ ವಿಜ್ಞಾನ’’ ಎಂದು ಅವರು ಹೇಳಿದರು.







