ಕೊಳ್ಳೇಗಾಲ: ಡಾ.ಬಾಬು ಜಗಜೀವನರಾಂ ಕಲಾ ಯುವಕರ ಸಂಘ ಉದ್ಘಾಟನೆ

ಕೊಳ್ಳೇಗಾಲ,ಫೆ.5: ನೂತನವಾಗಿ ಆರಂಭವಾದ ಸಂಘಟನೆಗಳು ತಮ್ಮ ಸುತ್ತಮುತ್ತಲ ಕುಟುಂಬಗಳ ಅಭಿವೃದ್ಧಿ ಹಾಗೂ ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರುವಂತೆ ನೋಡಿಕೊಳ್ಳಬೇಕು ಎಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಸಂಘದವರಿಗೆ ಕಿವಿಮಾತು ಹೇಳಿದರು.
ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಂ ಕಲಾ ಯುವಕರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೂತನವಾಗಿ ಸಂಘಗಳನ್ನು ಅಸ್ತಿತ್ವಕ್ಕೆ ತರುವುದಷ್ಟೇ ಅಲ್ಲ, ಸುಮುತ್ತಲ್ಲಿನಲ್ಲಿರುವ ಜನರ ಕೆಟ್ಟ ಚಟಗಳನ್ನು ಬಿಡಿಸಿ, ಅವರ ಬದಕನ್ನು ಸುಧಾರಣೆಗೊಳಿಸುವುದು ಮತ್ತು ಗುರಿಯಿಲ್ಲದೇ ಶಿಕ್ಷಣವನ್ನು ಮೊಟಕುಗೊಳಿಸುವ ಮಕ್ಕಳಿಗೆ ಕಲಿಕೆಯ ಬಗ್ಗೆ ಅರಿವು ಮೂಡಿಸುವುದು ಸಂಘಟನೆಯ ಗುರಿಯಾಗಬೇಕು ಎಂದು ಹೇಳಿದರು.
ಶಿವಶರಣ ಮಾದಾರ ಚೆನ್ನಯ್ಯ ರಾಜ್ಯಾಧ್ಯಕ್ಷ ಎಸ್.ಇ. ಮಹಾದೇವಪ್ಪ ಮಾತನಾಡಿ, ಬಾಬುಜಗಜೀವನ್‍ರಾಂ ದೇಶ ಕಂಡ ಮಹಾನ್ ವ್ಯಕ್ತಿಯಾಗಿದ್ದರು. ಇಂತಹ ಮಹನೀಯರ ಹೆಸರುಗಳಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿದ ಮೇಲೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿ.ಪಂ ಸದಸ್ಯ ಎಲ್ ನಾಗರಾಜು ನೂತನವಾಗಿ ಆರಂಭವಾದ ಡಾ.ಬಾಬುಜಗಜೀವನರಾಂ ಕಲಾ ಯುವಕರ ಸಂಘಕ್ಕೆ ಕ್ರೀಡಾ ಸಾಮಾಗ್ರಿಯನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕುರುಬನಕಟ್ಟೆ ಕ್ಷೇತ್ರದ ಧರ್ಮಾಧಿಕಾರಿ ವರುಣ ಲಿಂಗರಾಜೇಅರಸ್, ಗ್ರಾಪಂ.ಅಧ್ಯಕ್ಷೆ ಅಶ್ವಿನಿರಾಚಪ್ಪ, ಜಿ.ಪಂ ಸದಸ್ಯ ಎಲ್.ನಾಗರಾಜು, ಮಾಜಿ ತಾ.ಪಂ ಸದಸ್ಯ ಎಂ.ಪುಟ್ಟಣ್ಣ, ಬಾಬುಜಗಜೀವನ ರಾಂ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಬಸವನಪುರ ರಾಜಶೇಖರ್, ಮರಿಸ್ವಾಮಿ, ಬಾಲರಾಜ್ ಮತ್ತಿತರರಿದ್ದರು.







