ದಾವಣಗೆರೆ: ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಪ್ರತಿಭಟನೆ

ದಾವಣಗೆರೆ,ಫೆ.05: ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ದ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಕಾರ್ಯಕರ್ತರು ಹೆಗಡೆ ಶವಯಾತ್ರೆ ಮತ್ತು ಸಮಾಧಿಯ ಅಣಕು ಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆ ಮುಂಭಾಗದಲ್ಲಿ ಧರಣಿ ಕೈಗೊಂಡ ಪ್ರತಿಭಟನಾಕಾರರು ಸಚಿವ ಹೆಗಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನವನ್ನು ಬದಲಾಯಿಸುತ್ತೇವೆ ಹಾಗೂ ಇದನ್ನು ಪ್ರಶ್ನಿಸುತ್ತಿರುವ ಪರಿಶಿಷ್ಟ ಸಮುದಾಯದ ಜನರು ಬೊಗಳುವ ನಾಯಿಗಳೆಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುವುದು ಖಂಡನೀಯ. ಭಾರತದ ಸಂವಿಧಾನ ಪವಿತ್ರ ಗ್ರಂಥ, ಏಕತೆ, ಅಖಂಡತೆ, ಸಮಾನತೆ ಮತ್ತು ಜಾತ್ಯಾತೀತ ನೆಲೆಗಟ್ಟಿನ ಮೇಲೆ ದೇಶದ ಸಾರ್ವಭೌಮತ್ವಕ್ಕೆ ಭದ್ರಾ ಬುನಾದಿ ಹಾಕಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವವೇ ಮೆಚ್ಚುವಂತಹ ಸಂವಿಧಾನ ರಚಿಸಿದ ಮಾನವತವಾದಿ. ಇಂತಹ ಮಹಾತ್ಮರು ರಚಿಸಿರುವ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ದಲಿತ ಸಮುದಾಯವನ್ನು ಅಪಮಾನ ಮಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿ.ಹೆಚ್.ವೀರಭದ್ರಪ್ಪ, ರಾಮಯ್ಯ, ರಾಘವೇಂದ್ರನಾಯ್ಕ, ಎಲ್.ಎಂ.ಹನುಮಂತಪ್ಪ, ಜಯದೇವನಾಯ್ಕ, ಜಯಣ್ಣ, ಚಂದ್ರಪ್ಪ, ನೇತ್ರಾವತಿ, ವಿಶ್ವನಾಥ್, ನಾಗರಾಜನಾಯ್ಕ, ಶ್ಯಾಂ, ಗೀತಾಬಾಯಿ, ರಾಜೇಶ್, ಟಿ.ರಮೇಶ್, ಅಭಿಲಾಷ್, ಬಿ.ಎಂ.ಈಶ್ವರ್ ಮತ್ತಿತರರಿದ್ದರು.





