50 ಲಕ್ಷ ರೂ.ಬಹುಮಾನ ನೀಡಿದ್ದಕ್ಕೆ ದ್ರಾವಿಡ್ ಬೇಸರ!
ತಾರತಮ್ಯ ನೀತಿ ಸರಿಪಡಿಸಲು ಬಿಸಿಸಿಐಗೆ ಆಗ್ರಹ

ಮುಂಬೈ, ಫೆ.6: ನಾಲ್ಕನೇ ಬಾರಿ ಅಂಡರ್-19 ವಿಶ್ವಕಪ್‌ನ್ನು ಜಯಿಸಿ ದಾಖಲೆ ನಿರ್ಮಿಸಿರುವ ಭಾರತದ ಕಿರಿಯರ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್‌ಗೆ 50 ಲಕ್ಷ ರೂ., ಸಹಾಯಕ ಸಿಬ್ಬಂದಿಗಳಿಗೆ ತಲಾ 20 ಲಕ್ಷ ರೂ. ಹಾಗೂ ಆಟಗಾರರಿಗೆ ತಲಾ 30 ಲಕ್ಷ ರೂ. ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿತ್ತು. ಆದರೆ, ನಗದು ಬಹುಮಾನ ನೀಡಿಕೆಯಲ್ಲಿ ಬಿಸಿಸಿಐನ ತಾರತಮ್ಯ ನೀತಿಗೆ ದ್ರಾವಿಡ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಚಿಂಗ್ ಸಿಬ್ಬಂದಿಗಳಿಗಿಂತ ಹೆಚ್ಚು ಮೊತ್ತದ ಬಹುಮಾನ ಸ್ವೀಕರಿಸಲು ಇಷ್ಟಪಡದ ದ್ರಾವಿಡ್, ಎಲ್ಲ ಸಹಾಯಕ ಸಿಬ್ಬಂದಿಗೆ ಒಂದೇ ಮೊತ್ತದ ಬಹುಮಾನ ನೀಡಬೇಕು. ನನಗೆ ಹಾಗೂ ಇತರ ಕೋಚಿಂಗ್ ಸಿಬ್ಬಂದಿಗಳಲ್ಲಿ ತಾರತಮ್ಯ ಎಸೆಗಬಾರದು. ನ್ಯೂಝಿಲೆಂಡ್‌ನಲ್ಲಿ ಭಾರತ ಅಂಡರ್-19 ವಿಶ್ವಕಪ್ ಜಯಿಸಲು ಇಡೀ ಸಹಾಯಕ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಿದೆ ಎಂದು ದ್ರಾವಿಡ್ ಬಿಸಿಸಿಐಗೆ ವಿನಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಭಾರತ ತಂಡ ಅಂಡರ್-19 ವಿಶ್ವಕಪ್ ಗೆದ್ದ ತಕ್ಷಣ ಪತ್ರಿಕಾಗೋಷ್ಠಿ ನಡೆಸಿದ ಬಿಸಿಸಿಐ ಆಡಳಿತ ನೋಡಿಕೊಳ್ಳುತ್ತಿರುವ ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ, ಮುಖ್ಯ ಕೋಚ್ ದ್ರಾವಿಡ್‌ಗೆ 50 ಲಕ್ಷ ರೂ., ಬೌಲಿಂಗ್ ಕೋಚ್ ಪರಾಸ್ ಮ್ಹಾಂಬ್ರೆ, ಫೀಲ್ಡಿಂಗ್ ಕೋಚ್ ಅಭಯ್ ಶರ್ಮ, ಫಿಸಿಯೋ ಯೋಗೇಶ್ ಪಾರ್ಮರ್, ಟ್ರೈನರ್ ಆನಂದ್ ದಾಟೆ, ವಿಡಿಯೋ ಅನಾಲಿಸ್ಟ್ ದೇವರಾಜ್ ರಾವುತ್‌ಗೆ ತಲಾ 30 ಲಕ್ಷ ರೂ. ಹಾಗೂ 11 ಆಟಗಾರರಿಗೆ ತಲಾ 30 ಲಕ್ಷ ರೂ.ಬಹುಮಾನ ಪ್ರಕಟಿಸಲಾಗಿತ್ತು.