ಸರಕಾರಿ ನೌಕರರ ಪಿಂಚಣಿ: 6ನೇ ವೇತನ ಆಯೋಗದ ಶಿಫಾರಸು ಆಧರಿಸಿ ಕ್ರಮ; ಸಿದ್ದರಾಮಯ್ಯ

ಬೆಂಗಳೂರು, ಫೆ. 6: ರಾಜ್ಯ ಸರಕಾರಿ ನೌಕರರಿಗೆ ಈಗಾಗಲೇ ಜಾರಿಯಲ್ಲಿರುವ ಪಿಂಚಣಿ(ಎನ್‌ಪಿಎಸ್) ಯೋಜನೆ ಹಿಂಪಡೆಯುವುದು ಕಾರ್ಯಸಾಧುವಲ್ಲ. ಆದರೆ, ಈ ವ್ಯವಸ್ಥೆಯ ಸುಧಾರಣೆಗೆ ಆರನೆ ವೇತನ ಆಯೋಗ ನೀಡಿರುವ ಶಿಫಾರಸು ಆಧರಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಐಹೊಳೆ ಮಹಾಲಿಂಗಪ್ಪಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 2006ರ ನಂತರ ನೇಮಕಗೊಂಡ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ತೊಂದರೆಗೆ ಒಳಗಾದ ಹಲವು ಮಂದಿ ಸರಕಾರಕ್ಕೆ ಮನವಿ ನೀಡಿದ್ದಾರೆ. ಈಗಾಗಲೇ 12 ವರ್ಷದಿಂದ ಈ ವ್ಯವಸ್ಥೆಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಕೇಂದ್ರದ ಸಮಿತಿಯೊಂದನ್ನು ರಚಿಸಿ ಅದರ ಶಿಫಾರಸು ಆಧರಿಸಿ 2006ರ ಎಪ್ರಿಲ್ 1ರಿಂದ ಎನ್‌ಪಿಎಸ್ ಯೋಜನೆಯನ್ನು ಜಾರಿಗೊಳಿಸಿದೆ. ಈಗ ಆ ಯೋಜನೆ ಸರಿಯಿಲ್ಲ ಎಂದು ಹೇಳುವುದು ಮತ್ತು ಹಿಂಪಡೆಯಲು ನಿರ್ಧಾರ ತೆಗೆದುಕೊಳ್ಳುವುದು ಕಾರ್ಯಸಾಧುವಲ್ಲ ಎಂದರು.
ಪಿಂಚಣಿ ಯೋಜನೆ ಸುಧಾರಣೆಗೆ ಆರನೆ ವೇತನ ಆಯೋಗ ಶಿಫಾರಸು ನೀಡಿದೆ. ಶೀಘ್ರದಲ್ಲೆ ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.





