ಮತದಾರರ ಪಟ್ಟಿಯಲ್ಲಿ ಗೊಂದಲ: ಆರೋಪ-ಪ್ರತ್ಯಾರೋಪ
ಪುದು ಗ್ರಾಮ ಪಂಚಾಯತ್ ಚುನಾವಣೆ
.jpeg)
ಫರಂಗಿಪೇಟೆ, ಫೆ. 6: ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ 2 ಸೀಟುಗಳನ್ನು ಏರಿಕೆ ಮಾಡಲು ಮತದಾರರ ಪಟ್ಟಿಯನ್ನು ವಿಂಗಡಣೆ ಮಾಡುವಾಗ ಚುನಾವಣೆ ಇಲಾಖೆಯು ವಿನಾ ಕಾರಣ ಗೊಂದಲವನ್ನು ಸೃಷ್ಟಿಸಿದೆ ಎಂದು ಹಲವು ಪಕ್ಷಗಳು ಆರೋಪಿಸಿವೆ.
ಈ ಬಗ್ಗೆ ಸರಿಪಡಿಸುವಂತೆ ಚುನಾವಣಾಧಿಕಾರಿಗಳಿಗೆ ಹಾಗೂ ಬಂಟ್ವಾಳ ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ 2ನೆ ಸಲ ತಯಾರಿಸಿದ ಪಟ್ಟಿಯಲ್ಲೂ ಮತ್ತಷ್ಟು ಗೊಂದಲಗಳು ಉಂಟಾಗಿವೆ. ಇದರಿಂದ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಪಕ್ಷಗಳು ಆರೋಪ, ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸಿವೆ. ಜೊತೆಗೆ ಎರಡು ಪಕ್ಷದ ಪ್ರಮುಖರು ಸೋಮವಾರ ರಾತ್ರಿ ಮಿನಿವಿಧಾನ ಸೌಧಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಹರಿಸಲು ಪಟ್ಟು ಹಿಡಿದು ಕುಳಿತು ಕೊಂಡಿದ್ದರು. ಸರಿಪಡಿಸದಿದ್ದರೆ ಜಾಗ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಚುನಾವಣಾಧಿಕಾರಿ ರಾಜೇಶ್ ಸ್ಥಳದಲ್ಲಿ ಮೊಕ್ಕಾಂ ಮಾಡಿ ಚುನಾವಣಾ ಶಾಖೆಯ ಅಧಿಕಾರಿಗಳ ಜೊತೆ ಪಟ್ಟಿಯನ್ನು ತಾತ್ಕಾಲಿಕವಾಗಿ ಸರಿಪಡಿಸಿದ ಘಟನೆಯೂ ನಡೆಯಿತು.
ಗೊಂದಲ ಏನು?
ವಾರ್ಡ್ ನಂ 6ರ ಭಾಗಶಃ ಮತಗಳನ್ನು ವಾರ್ಡ್ ನಂ 10ಕ್ಕೆ ಬರುವಂತೆ ಹಾಗೂ ವಾರ್ಡ್ ನಂ 1ರ ಭಾಗಶಃ ಮತಗಳನ್ನು ವಾರ್ಡ್ ನಂ 4 ಕ್ಕೆ ಬರುವಂತೆ ಮಾಡಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಲು ಮತದಾರರ ಪಟ್ಟಿಯನ್ನು ವಿಂಗಡಿಸಲಾಗಿದೆ. 600 ಮತಗಳಿರುವ ವಾರ್ಡ್ ನಲ್ಲಿ 4 ಸೀಟು, 1000 ಮತಗಳಿರುವ ವಾರ್ಡ್ ನಲ್ಲಿ 2 ಸೀಟು ಗಳನ್ನು ಮೀಸಲಿಡುವ ಮೂಲಕ ಚುನಾವಣಾ ಅಧಿನಿಯಮಗಳನ್ನು ಗಾಳಿಗೆ ತೂರಲಾಗಿರುತ್ತದೆ. ಮೀಸಲಾತಿ ಪಟ್ಟಿಯಲ್ಲಿ ಕೂಡಾ ಗೊಂದಲಗಳು ಉಂಟಾಗಿದೆ ಎಂದು ಎಸ್‌ಡಿಪಿಐ ಆರೋಪ ವ್ಯಕ್ತಪಡಿಸಿದರೆ, ಮತದಾರರ ಪಟ್ಟಿಯಲ್ಲಿ ಗೊಂದಲವಿರುವ ಬಗ್ಗೆ ಕಂಡು ಹಿಡಿದ ಪುದು ವಲಯ ಕಾಂಗ್ರೆಸ್ ಫಾರೂಕ್ ನೇತೃತ್ವದ ನಿಯೋಗವು ತಹಶೀಲ್ದಾರ್‌ರೊಂದಿಗೆ ಮಾತುಕತೆ ನಡೆಸಿ ಮತದಾರ ಪಟ್ಟಿ ಸರಿಪಡಿಸಿ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದೆ. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ. ಇದರಲ್ಲಿ ಎಸ್‌ಡಿಪಿಐ ನಾಯಕರು ರಾಜಕೀಯ ಬೇಳೆ ಬೇಯಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.







