ಒಳಚರಂಡಿ ಕಾಮಗಾರಿ ಪರಿಶೀಲನೆಗೆ ಉನ್ನತ ಸಮಿತಿ: ಸಚಿವ ರೋಷನ್‌ಬೇಗ್

ಬೆಂಗಳೂರು, ಫೆ. 6: ಚಿತ್ರದುರ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ ಯೋಜನೆ ಕಾಮಗಾರಿ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿಯನ್ನು ಕಳುಹಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯರಾದ ಸಿ.ಟಿ.ರವಿ, ಜಿ.ಎಚ್. ತಿಪ್ಪಾರೆಡ್ಡಿ, ಕೆ.ಜಿ.ಬೋಪಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಚಿಕ್ಕಮಗಳೂರಿನಲ್ಲಿ ಒಳಚರಂಡಿ ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
2010ರಲ್ಲಿ ಆರಂಭವಾದ ಚಿಕ್ಕಮಗಳೂರಿನ ಒಳಚರಂಡಿ ಕಾಮಗಾರಿ ಭೂ ಸ್ವಾಧೀನ ಸಮಸ್ಯೆ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಆ ಯೋಜನೆ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಳಚರಂಡಿ ಕಾಮಗಾರಿಗಳಲ್ಲಿ ಕಳಪೆ ಹಾಗೂ ವಿಳಂಬಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನಗೆ ಉನ್ನತ ಮಟ್ಟದ ಸಮಿತಿ ಕಳುಹಿಸಲಾಗುವುದು ಎಂದು ರೋಷನ್‌ಬೇಗ್ ಭರವಸೆ ನೀಡಿದರು.
‘ಮಲೆನಾಡು ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಗಳು ವಿಳಂಬವಾಗುತ್ತಿದ್ದು, ನಾಗರಿಕ ಸೌಲಭ್ಯ ಕಲ್ಪಿಸುವ ನೆಪದಲ್ಲಿ ಲೂಟಿ ನಡೆಯುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’
-ಕೆ.ಜಿ.ಬೋಪಯ್ಯ ಬಿಜೆಪಿ ಸದಸ್ಯ







