ಸ್ಮಾರ್ಟ್‌ಸಿಟಿ ಅಭಿವೃದ್ಧಿ: ನಗರದ ಒತ್ತಡ ಕಡಿಮೆ ಮಾಡಲು ಕ್ರಮ; ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಫೆ. 6: ಬೆಂಗಳೂರು ನಗರದ ಒತ್ತಡವನ್ನು ಕಡಿಮೆ ಮಾಡಲು ಎಂಟು ಕ್ಲಸ್ಟರ್‌ಗಳನ್ನು ಗುರುತಿಸಿದ್ದು, ಅವುಗಳನ್ನು ಸ್ಮಾರ್ಟ್‌ಸಿಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಎನ್.ಎ.ಹಾರಿಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮನಗರ-ಚನ್ನಪಟ್ಟಣ, ಬಿಡದಿ-ಹಾರೋಹಳ್ಳಿ, ನೆಲಮಂಗಲ-ಪೀಣ್ಯ, ದಾಬಸ್‌ಪೇಟೆ-ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ-ಯಲಹಂಕ, ಹೊಸಕೋಟೆ-ಕೆ.ಆರ್.ಪುರ, ಜಿಗಣಿ-ಎಲೆಕ್ಟ್ರಾನಿಕ್‌ಸಿಟಿ-ಬೊಮ್ಮಸಂದ್ರ-ಅತ್ತಿಬೆಲೆ ಕ್ಲಸ್ಟರ್ ಸಿಟಿಗಳನ್ನು ಹಾಗೂ ಆನೇಕಲ್, ಕನಕಪುರ, ಮಾಗಡಿ, ವಿಜಯಪುರ ಅಭಿವೃದ್ಧಿಪಡಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿ ಉಪನಗರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸಿ ಈ ಪ್ರದೇಶಗಳನ್ನು ಸಂಪರ್ಕಿಸಲಾಗುವುದು. ಬೆಂಗಳೂರು ಮಹಾನಗರ ಪ್ರಾದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ‘ಕೆಲಸ-ಆಟ-ವಸತಿ’ ಇವುಗಳನ್ನು ಆಧಾರವಾಗಿಟ್ಟುಕೊಂಡು ಗ್ರೇಟರ್ ಬೆಂಗಳೂರು, ಬಿಡದಿ ಸ್ಮಾರ್ಟ್ ಸಿಟಿ ಸಮಗ್ರ ಉಪನಗರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.ಪರಿಷ್ಕೃತ ರಚನಾ ನಕ್ಷೆ 2031ನ್ನು ತಯಾರಿಸಲಾಗಿದೆ. ಸಮಗ್ರ ಸಂಚಾರ ಮತ್ತು ಸಾರಿಗೆ ಅಧ್ಯಯನ ನಡೆಸಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ ಸಿಗ್ನಲ್‌ಫ್ರೀ ಕಾರಿಡಾರ್ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಳೆ ನೀರು ಕಾಲುವೆ ಅಭಿವೃದ್ಧಿಗೆ ಕ್ರಮ
ಬೆಂಗಳೂರು ನಗರದಲ್ಲಿನ ಮಳೆನೀರಿನ ಅನಾಹುತಗಳನ್ನು ತಪ್ಪಿಸಲು 1,200 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇನ್ನೂ 300 ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಶೀಘ್ರದಲ್ಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬಿಜೆಪಿ ಸದಸ್ಯ ಆರ್. ಅಶೋಕ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಇದೀಗ ಅದನ್ನು ತಪ್ಪಿಸಲು ಮೊದಲ ಹಂತದಲ್ಲಿ 800 ಕೋಟಿ ರೂ. ಹಾಗೂ 2ನೆ ಹಂತದಲ್ಲಿ 300 ಕೋಟಿ ರೂ.ಸೇರಿ 1,100 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮತ್ತಷ್ಟು ಅನುದಾನ ಒದಗಿಸಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಅವರು 300 ಕೋಟಿ ರೂ.ಒದಗಿಸಲು ಸಮ್ಮತಿಸಿದ್ದಾರೆ ಎಂದ ಅವರು, ಶಾಂತಿನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಕೆ.ಆರ್.ಪುರ ಸೇರಿದಂತೆ 8 ಪ್ರಮುಖ ಸ್ಥಳಗಳಲ್ಲಿ ಮಳೆ ನೀರು ಹರಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ನಗರದಲ್ಲಿ ಒಟ್ಟು 800 ಕಿ.ಮೀ. ಉದ್ದದ ಮಳೆನೀರು ಕಾಲುವೆಗಳ ಪೈಕಿ ಈಗಾಗಲೇ 400ಕಿ.ಮೀ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಉಳಿದ 400ಕಿ.ಮೀ ಕಾಮಗಾರಿ ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.







