ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್: ಟಿಡಿಪಿ,ವೈಎಸ್‌ಆರ್ ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ,ಫೆ.6: ಆಂಧ್ರಪ್ರದೇಶದಲ್ಲಿ ಬದ್ಧವೈರಿಗಳಾಗಿರುವ ತೆಲುಗು ದೇಶಂ ಪಾರ್ಟಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಸಂಸದರು ತಮ್ಮ ರಾಜ್ಯಕ್ಕೆ ಹೆಚ್ಚಿನ ಸೌಲಭ್ಯಕ್ಕಾಗಿ ಆಗ್ರಹಿಸಲು ಪರಸ್ಪರ ಕೈ ಜೋಡಿಸಿದ ವಿದ್ಯಮಾನಕ್ಕೆ ಲೋಕಸಭೆಯು ಮಂಗಳವಾರ ಸಾಕ್ಷಿಯಾಯಿತು.
ಎನ್‌ಡಿಎ ಮಿತ್ರಪಕ್ಷವಾಗಿರುವ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ನ ಬೇಡಿಕೆಯನ್ನು ಮುಂದಿಟ್ಟುಕೊಂಡು ತೀವ್ರ ಪ್ರತಿಭಟನೆಯನ್ನು ನಡೆಸಿದ್ದರಿಂದ ಲೋಕಸಭಾ ಕಲಾಪಗಳನ್ನು ಕೆಲಕಾಲ ಮುಂದೂಡುವಂತಾಗಿತ್ತು.
ಮುಂಗಡಪತ್ರದಿಂದ ತಮಗೆ ಅಸಮಾಧಾನವಾಗಿದೆ, ಅದರಲ್ಲಿ ತಮ್ಮ ರಾಜ್ಯಕ್ಕೆ ಯಾವುದೇ ಕೊಡುಗೆಗಳನ್ನು ಘೋಷಿಸಲಾಗಿಲ್ಲ ಎಂದು ಟಿಡಿಪಿ ಸದಸ್ಯರು ಪ್ರತಿಪಾದಿಸಿ ದರು.
ಟಿಡಿಪಿ ಸದಸ್ಯರು ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಯ ಜಾರಿಯಿಂದ ಹಿಡಿದು ಬಿಜೆಪಿಯು ನೀಡಿದ್ದ ಭರವಸೆಗಳ ಈಡೇರಿಕೆಯವರೆಗೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಭಿತ್ತಿಪತ್ರಗಳೊಂದಿಗೆ ಸದನದ ಅಂಗಳಕ್ಕೆ ನುಗ್ಗಿ ಘೋಷಣೆಗಳನ್ನು ಕೂಗಿದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿಯೂ ಅವರು ಆಗ್ರಹಿಸಿದರು.
ಟಿಡಿಪಿ ಸಂಸದರೋರ್ವರು ತಾಳಗಳನ್ನು ತಂದಿದ್ದು, ಭಜನೆಯನ್ನು ಹಾಡುವ ಮೂಲಕ ತನ್ನ ಪಕ್ಷದ ಬೇಡಿಕೆಗಳನ್ನು ಮಂಡಿಸಿದರು.
ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು ಸದನದ ಅಂಗಳದಲ್ಲಿದ್ದ ಪ್ರತಿಭಟನಾಕಾರ ರೊಂದಿಗೆ ಸೇರಿಕೊಂಡರಾದರೂ ಟಿಡಿಪಿ ಸದಸ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಪುನರ್‌ರಚನೆಯ ನಂತರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎನ್ನುವುದು ಅವರ ಮುಖ್ಯ ಬೇಡಿಕೆಯಾಗಿತ್ತು.







