ಕಾಂಗ್ರೆಸ್ ಸರಕಾರದಲ್ಲಿ ಅಪರಾಧ ಪ್ರಮಾಣ ಕಡಿಮೆ: ಐವನ್ ಡಿಸೋಜ

ಬೆಂಗಳೂರು, ಫೆ.6: ಕಳೆದ ಬಾರಿಯ ಬಿಜೆಪಿ ಆಡಳಿತಕ್ಕೆ ಹೋಲಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಅಪರಾಧಗಳ ಪ್ರಮಾಣ ಕಡಿಮೆಯಾಗಿವೆ ಎಂದು ವಿಧಾನಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದರು.
ಬುಧವಾರ ವಿಧಾನಪರಿಷತ್‌ನಲ್ಲಿ ನಿಯಮ 68ರಡಿಯಲ್ಲಿ ‘ರಾಜ್ಯದ ಕಾನೂನು ಸುವ್ಯವಸ್ಥೆ’ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, 2008-13ರ ಬಿಜೆಪಿ ಆಡಳಿತದಲ್ಲಿ ಅಪರಾಧಗಳ ಪ್ರಮಾಣ ಶೇ.7.3ರಷ್ಟು ಇದ್ದರೆ, 2014-18ರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಶೇ.5.1ಕ್ಕೆ ಇಳಿದಿದೆ. ಹೀಗಾಗಿ ರಾಜ್ಯ ಸರಕಾರ ಅಪರಾಧಗಳ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ 29,684 ಪೊಲೀಸ್ ಅಧಿಕಾರಿಗಳು ನೇಮಕ ಮಾಡಿದ್ದಾರೆ. ಹಲವು ಅಧಿಕಾರಿಗಳಿಗೆ ಭಡ್ತಿ ಕೊಟ್ಟು, ವಿವಿಧ ವಿಭಾಗಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಆಡಳಿತ ನಡೆಸುವಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಇದರಿಂದಾಗಿಯೇ ಸಾಕಷ್ಟು ಅಪರಾಧಗಳು ತಗ್ಗಿವೆ ಎಂದು ಅವರು ಹೇಳಿದರು.
ನೈತಿಕ ಪೊಲೀಸ್‌ಗಿರಿ ಹೆಚ್ಚಳ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಳವಾಗಿದೆ. ಅನ್ಯ ಧರ್ಮದ ಹುಡುಗ-ಹುಡುಗಿ ಒಂದು ಕಡೆ ನಿಲ್ಲುವಂತಿಲ್ಲ. ಒಟ್ಟಿಗೆ ಟೀ ಕುಡಿಯುವಂತಿಲ್ಲ. ಕೋಮುಶಕ್ತಿಗಳಿಂದಾಗಿ ಕರಾವಳಿ ಪ್ರದೇಶದ ನೆಮ್ಮದಿಯೇ ಹಾಳಾಗಿದೆ. ಹೀಗಾಗಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವಂತಹ ನೈತಿಕ ಪೊಲೀಸ್‌ಗಿರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಹಿಂದೂ ಮತೀಯ ಶಕ್ತಿಗಳು ಯಾವ ಮಟ್ಟಕ್ಕೆ ಬೆಳೆದಿವೆಯೆಂದರೆ, ಬಂಟ್ವಾಳದಲ್ಲಿ ಮುಸ್ಲಿಮ್ ಹುಡುಗ ಎಂದು ಭಾವಿಸಿ ಹಿಂದೂ ಹುಡುಗನನ್ನೆ ಕೊಲೆ ಮಾಡಿದ್ದಾರೆ. ಬಾಳಿಗಾ ಎಂಬ ಹಿಂದೂ ಆರ್‌ಟಿಐ ಕಾರ್ಯಕರ್ತನನ್ನು ಹಿಂದೂ ಮತೀಯ ಶಕ್ತಿಗಳೇ ಬರ್ಬರವಾಗಿ ಹತ್ಯೆ ಮಾಡಿವೆ. ಹಾಗೂ ದೀಪಕ್‌ರಾವ್ ಹತ್ಯೆಗೆ ಪ್ರತೀಕವಾಗಿ ಬಶೀರ್ ಎಂಬ ಮುಸ್ಲಿಮ್ ವ್ಯಕ್ತಿಯನ್ನು ಹತ್ಯೆ ಮಾಡಿದ್ದೇವೆ ಎಂದು ಸಂಘಪರಿವಾರದ ಕೆಲವು ಸಂಘಟನೆಗಳು ಬಹಿರಂಗವಾಗಿ ಹೇಳಿಕೊಳ್ಳುತ್ತಿವೆ ಎಂದು ಅವರು ವಿಷಾದಿಸಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದರೆ ಗಲಭೆಗೆ ಕಾರಣವಾಗುವ ಹಿಂದೂ, ಮುಸ್ಲಿಮ್ ಕೋಮು ಶಕ್ತಿಗಳ ವಿರುದ್ಧ ಪಕ್ಷಭೇದ ಮರೆತು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲ್ಲೆ, ಹತ್ಯೆ ನಡೆಸುವ ಆರೋಪಿಗಳನ್ನು ಯಾವುದೆ ಮುಲಾಜಿಲ್ಲದೆ ಬಂಧನಕ್ಕೆ ಒಳಪಡಿಸುತ್ತಿದೆ. ಇವೆಲ್ಲ ಕಾರಣಗಳಿಂದ ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಳೆದ 5ವರ್ಷಗಳಿಂದ ಕಡಿಮೆಯಾಗಿವೆ ಎಂದು ಅವರು ಹೇಳಿದರು.
ಕೋಮು ಗಲಭೆಗಳಲ್ಲಿ ಸಾವನ್ನಪ್ಪುವವರು ಹಾಗೂ ಗಲಭೆಯಲ್ಲಿ ಪಾಲ್ಗೊಳ್ಳುವವರು ದಲಿತ ಹಾಗೂ ಹಿಂದುಳಿದ ಜಾತಿಯ ಯುವಕರೇ ಆಗಿದ್ದಾರೆ. ಇವರ ಕುಟುಂಬಗಳಲ್ಲಿ ಎರಡು ಹೊತ್ತು ಊಟಕ್ಕೂ ಇಲ್ಲದೆ ಪರದಾಡುವಂತಹ ಪರಿಸ್ಥಿತಿಯಿದೆ. ಆದರೆ, ಕೋಮು ಗಲಭೆಗೆ ಪ್ರಚೋದನೆ ನೀಡುವ ಮೇಲು ಜಾತಿಯ ನಾಯಕರು ಕೋಮು ಗಲಭೆಯಲ್ಲಿ ನೇರವಾಗಿ ಭಾಗವಹಿಸುವುದಿಲ್ಲ. ಹಾಗೂ ಅವರ ಮಕ್ಕಳು ಅಮೆರಿಕಾ, ಇಂಗ್ಲೆಡ್‌ನಂತಹ ಮುಂದುವರೆದ ದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಕಲಿಯುತ್ತಿರುತ್ತಾರೆ.
-ಐವಾನ್ ಡಿಸೋಜ, ಮುಖ್ಯ ಸಚೇತಕ, ವಿಧಾನ ಪರಿಷತ್







