ಹಳ್ನಾಡು ರಸ್ತೆ ದುರಸ್ತಿಗೆ ಆಗ್ರಹ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಕುಂದಾಪುರ, ಫೆ. 6: ಸಂಪೂರ್ಣ ಹದಗೆಟ್ಟಿರುವ ಸುಮಾರು 6 ಕಿಮೀ ಉದ್ದದ ದೂಪದಕಟ್ಟೆ- ಹಳ್ನಾಡು ಸಂಪರ್ಕ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸುವಂತೆ ಆಗ್ರಹಿಸಿರುವ ಗ್ರಾಮಸ್ಥರು, ಇಲ್ಲದಿದ್ದರೆ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕುಂದಾಪುರದಿಂದ 15 ಕಿ.ಮೀ. ದೂರದಲ್ಲಿರುವ ಕಾವ್ರಾಡಿ ಗ್ರಾಪಂ ವ್ಯಾಪ್ತಿ ಯ ಕಂಡ್ಲೂರಿನಿಂದ ದೂಪದಕಟ್ಟೆ, ಹಳ್ನಾಡು, ಮುಳ್ಳುಗುಡ್ಡೆಗೆ ಸಂಪರ್ಕ ಕಲ್ಪಿಸುವ ದೂಪದಕಟ್ಟೆ- ಹಳ್ನಾಡು ರಸ್ತೆಯು ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಈ ಭಾಗದಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಕೆಲಸಕ್ಕಾಗಿ ಸಂಚರಿಸುವ ವಾಹನ ಚಾಲಕರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.
1999ರಲ್ಲಿ ಈ ರಸ್ತೆಗೆ ಡಾಮರು ಹಾಕಲಾಗಿದ್ದು, ಅಲ್ಲಿಂದ ಈವರೆಗೆ ಒಂದು ಬಾರಿ ಮಾತ್ರ ತೇಪೆ ಕಾರ್ಯ ಮಾಡಲಾಗಿತ್ತು. ಆ ನಂತರ ಈವರೆಗೂ ಯಾವುದೇ ದುರಸ್ತಿ ಕಾರ್ಯ ಮಾಡಿಲ್ಲ. ಚುನಾವಣೆ ವೇಳೆ ಬಂದು ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಆದರೆ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಸ್ಥಳೀಯ ರಿಕ್ಷಾ ಚಾಲಕ ಸುಕುಮಾರ ದೇವಾಡಿಗ ಆರೋಪಿಸಿದರು.
ಈ ರಸ್ತೆಯಲ್ಲಿ ಯಾವುದೇ ದಾರಿದೀಪಗಳು ಇಲ್ಲದಿರುವುದರಿಂದ ರಾತ್ರಿ ವೇಳೆ ನಡೆದಾಡುವುದು ಕಷ್ಟ ಸಾಧ್ಯವಾಗಿದೆ. ಈ ಭಾಗದಿಂದ ಬಸ್ರೂರು, ಕುಂದಾಪುರ, ಕೋಟೇಶ್ವರ, ಶಂಕರನಾರಾಯಣ, ಕಂಡ್ಲೂರಿನ ಶಾಲಾ- ಕಾಲೇಜುಗಳಿಗೆ ಸುಮಾರು 75ರಿಂದ 80 ಮಂದಿ ವಿದ್ಯಾರ್ಥಿಗಳು ದಿನವೂ ಹೋಗಿ ಬರುತ್ತಿದ್ದಾರೆ.
ಇದರ ವಿರುದ್ಧ ಹೋರಾಟಕ್ಕೆ ಇಳಿದಿರುವ ಹಳ್ನಾಡು-ದೂಪದಕಟ್ಟೆ ಗ್ರಾಮಸ್ಥರು, ಮುಂಬರುವ ವಿಧಾನಸಭಾ ಚುನಾವಣೆಯೊಳಗೆ ರಸ್ತೆ ದುರಸ್ತಿ ಮಾಡದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನು ನೀಡಿ ದ್ದಾರೆ. ಈ ಕುರಿತು ಗ್ರಾಮಸ್ಥರು ಬೈಂದೂರು ಶಾಸಕರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಿದ್ದಾರೆ.







