ನಿಷ್ಕಳಂಕ ವ್ಯಕ್ತಿಯನ್ನು ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಸವಾಲು

ಬೆಂಗಳೂರು, ಫೆ. 6: ‘ನಿಷ್ಕಳಂಕ ವ್ಯಕ್ತಿಯನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ ಮೂಲಕ ಬಿಜೆಪಿ ರಾಷ್ಟ್ರೀಯ ಮುಖಂಡರು ಹಾಗೂ ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದಾರೆ.
‘ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತು ಆರಂಭಿಸಿರುವುದು ನನಗೆ ಸಂತಸ ತಂದಿದೆ. ಈ ಕುರಿತು ಚರ್ಚಿಸಲು ಅವರನ್ನು ಆಹ್ವಾನಿಸುತ್ತೇನೆ. ಮೊದಲು ಲೋಕ್‌ಪಾಲ್ ನೇಮಿಸಬೇಕು. ನ್ಯಾಯಧೀಶ ಲೋಯಾ ಸಾವಿನ ಪ್ರಕರಣ ತನಿಖೆ ನಡೆಸಬೇಕು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪೆನಿ ವಿರುದ್ಧದ ಅಕ್ರಮ ಆರೋಪ ತನಿಖೆ ಆರಂಭಿಸಬೇಕು’ ಎಂದು ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನನಗೂ ಸಂತಸ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ಈ ಚರ್ಚೆ ಆರಂಭಿಸಿದ್ದು ನನಗೂ ಸಂತಸ ತಂದಿದೆ. ನೀವು ದಿಲ್ಲಿಯತ್ತ ಮುಖಮಾಡುವ ಮುನ್ನ ನನ್ನ ಕೆಲ ಪ್ರಶ್ನೆಗಳಿಗೆ ಏಕೆ ಉತ್ತರಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ.
‘ಯಾಕೆ ನೀವು ಲೋಕಾಯುಕ್ತದ ಎಲ್ಲ ಅಧಿಕಾರ ರದ್ದುಗೊಳಿಸಿ ಹಲ್ಲಿಲ್ಲದಂತೆ ಮಾಡಿದಿರಿ? ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ಎಫ್‌ಐಆರ್‌ನಲ್ಲಿ ಮೊದಲ ಆರೋಪಿ ಎಂದು ಪರಿಗಣಿಸಲಾಗಿರುವ ಕೆ.ಜೆ.ಜಾರ್ಜ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಯಾಕೆ ಅಂತಹ ಸಚಿವರ ಪರ ನಿಂತಿದ್ದೀರಿ? ಅಂತಹ ಕಳಂಕಿತರಿಂದ ನಿಮ್ಮ ಸಚಿವ ಸಂಪುಟಕ್ಕೆ ಏನು ಅರ್ಹತೆ ದೊರೆಯಲಿದೆ? ನಿಯಮಗಳನ್ನು ಉಲ್ಲಂಘಿಸಿ ಯೋಜನೆಗಳಿಗೆ ಅನುಮತಿ ನೀಡುವುದಕ್ಕಾಗಿ ಉದ್ಯಮಿಯೊಬ್ಬರಿಂದ 70ಲಕ್ಷ ರೂ. ಮೊತ್ತದ ಗಡಿಯಾರ ಪಡೆದುಕೊಂಡಿರುವುದನ್ನು ನಿಮಗೆ ನೆನಪಿಸುತ್ತಿದ್ದೇನೆ. ಭ್ರಷ್ಟಾಚಾರಕ್ಕೆ ಸಾಕ್ಷ್ಯ ಸಾಕಲ್ಲವೇ? ಉತ್ತರಿಸುವ ಧೈರ್ಯ ತೋರಿ’ ಎಂದು ಟ್ವಿಟರ್ ಮೂಲಕ ಬಿಎಸ್‌ವೈ ಪ್ರಶ್ನಿಸಿದ್ದಾರೆ.







