ನಾಯಿಯೆಂದು ಚಿರತೆಯ ಬೆನ್ನು ಸವರಿದ ವ್ಯಕ್ತಿ !

ಮೈಸೂರು,ಫೆ.6: ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆಯೊಂದು, ಉತ್ತನಹಳ್ಳಿ ರಸ್ತೆಯ ರಾಜಣ್ಣ ಬಾಳೆಹಣ್ಣು ಮಂಡಿಯಲ್ಲಿ ಸೆರೆಯಾದ ಘಟನೆ ನಡೆದಿದೆ.
ಚಿರತೆಯು ಉತ್ತನಹಳ್ಳಿ ರಸ್ತೆಯ ರಾಜಣ್ಣ ಬಾಳೆಹಣ್ಣು ಮಂಡಿಯನ್ನು ಪ್ರವೇಶ ಮಾಡಿ, ಅಲ್ಲಿದ್ದ ನಾಯಿಯನ್ನು ತಿಂದು ಮುಗಿಸಿದೆ. ನಂತರ ಇಡೀ ರಾತ್ರಿ ಅದೇ ಮಂಡಿಯಲ್ಲೇ ಕಾಲ ಕಳೆದಿದ್ದು, ಅಲ್ಲೇ ಮಲಗಿದ್ದ ರಾಮಕೃಷ್ಣಪ್ಪ ಪಕ್ಕದಲ್ಲೇ ಚಿರತೆಯೂ ಮಲಗಿತ್ತು ಎನ್ನಲಾಗಿದೆ. ಈ ವೇಳೆ ರಾಮಕೃಷ್ಣಪ್ಪ ನಾಯಿ ಎಂದು ತಿಳಿದು ಚಿರತೆಯ ಬೆನ್ನು ಸವರಿದ್ದರು. ಆದರೆ ತಾನು ಬೆನ್ನು ಸವರಿದ್ದು ನಾಯಿ ಅಲ್ಲ, ಚಿರತೆ ಎಂದು ತಿಳಿದ ಬಳಿಕ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಸೆರೆಹಿಡಿದಿದ್ದು, ನಂತರ ಮೈಸೂರು ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
Next Story