ರಫೇಲ್ ಯುದ್ದ ವಿಮಾನ ಒಪ್ಪಂದ ಒಂದು ದೊಡ್ಡ ಹಗರಣ: ರಾಹುಲ್ ಗಾಂಧಿ ಆರೋಪ

ಹೊಸದಿಲ್ಲಿ, ಫೆ.6: 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತವು ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಒಪ್ಪಂದವು ಗೌಪ್ಯ ಮಾಹಿತಿಯಾಗಿರುವುದರಿಂದ ಅದರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಈ ಒಪ್ಪಂದವು ಒಂದು ‘ದೊಡ್ಡ ಹಗರಣವಾಗಿದೆ’ ಎಂದು ಮಂಗಳವಾರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಬಗ್ಗೆ ಗುಜರಾತ್ ಚುನಾವಣೆಯ ವೇಳೆಯೂ ಪ್ರಸ್ತಾಪ ಮಾಡಿದ್ದ ರಾಹುಲ್ ಗಾಂಧಿ, ಕೇವಲ ಒಬ್ಬ ಉದ್ಯಮಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರಧಾನಿ ಮೋದಿಯವರು ಖುದ್ದಾಗಿ ಪ್ಯಾರಿಸ್‌ಗೆ ತೆರಳಿ ಈ ಒಪ್ಪಂದವನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಎಷ್ಟು ಹಣವನ್ನು ನೀಡಲಾಯಿತು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ. ಅದರರ್ಥವೇನು? ಅದರ ಅರ್ಥ ಇದರಲ್ಲಿ ಹಗರಣ ನಡೆದಿದೆ ಎಂಬುದು. ಇಡೀ ದೇಶಕ್ಕೆ ಈ ಬಗ್ಗೆ ತಿಳಿದಿದೆ” ಎಂದು ಗಾಂಧಿ ತಿಳಿಸಿದ್ದಾರೆ. ರಫೆಲ್ ಯುದ್ಧ ವಿಮಾನ ಖರೀದಿಗಾಗಿ ಯುಪಿಎ ಸರಕಾರ ಅಂತಿಮಗೊಳಿಸಿದ್ದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಎನ್‌ಡಿಎ ಸರಕಾರ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದದಡಿ ನೀಡಲಾಗಿರುವ ಮೊತ್ತವನ್ನು ಬಹಿರಂಗಪಡಿಸಬೇಕು ಎಂದು ಸಮಾಜವಾದಿ ಪಕ್ಷದ ಸದಸ್ಯರಾದ ನರೇಶ್ ಅಗರ್ವಾಲ್ ಆಗ್ರಹಿಸಿದ್ದರು.
2008ರಲ್ಲಿ ಭಾರತ ಮತ್ತು ಫ್ರಾನ್ಸ್ ಸರಕಾರಗಳು ಸಹಿ ಹಾಕಿರುವ ಭದ್ರತಾ ಒಪ್ಪಂದದ ಪ್ರಕಾರ ರಫೇಲ್ ಯುದ್ಧ ವಿಮಾನಗಳ ಖರೀದಿಯ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ರಕ್ಷಣಾ ಸಚಿವೆ ತಿಳಿಸಿದ್ದರು.
36 ಯುದ್ಧ ವಿಮಾನಗಳ ಖರೀದಿಯಲ್ಲಿ ಬೃಹತ್ ಹಗರಣವೊಂದು ನಡೆಯುತ್ತಿದೆ ಎಂದು ಕಾಂಗ್ರೆಸ್ ಕಳೆದ ವರ್ಷ ಆರೋಪಿಸಿತ್ತು ಮತ್ತು ಪ್ರಧಾನಿ ಮೋದಿ ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಸಂಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ದೂರಿತ್ತು.







