ಪರಮಾಣು ಸಾಮರ್ಥ್ಯದ ಅಗ್ನಿ-1 ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ

ಹೊಸದಿಲ್ಲಿ,ಫೆ.6: ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಪರಮಾಣು ಸಾಮರ್ಥ್ಯದ ಅಲ್ಪ ವ್ಯಾಪ್ತಿಯ ಕ್ಷಿಪಣಿ ಅಗ್ನಿ-1ರ ಪರೀಕ್ಷಾರ್ಥ ಉಡಾವಣೆಯನ್ನು ಮಂಗಳವಾರ ಬೆಳಿಗ್ಗೆ ಒಡಿಶಾದ ಡಾ.ಅಬ್ದುಲ್ ಕಲಾಂ ದ್ವೀಪದ ಸಮಗ್ರ ಪರೀಕ್ಷಾ ವಲಯದಲ್ಲಿ ಸಂಚಾರಿ ಉಡಾವಕದ ಮೂಲಕ ಯಶಸ್ವಿಯಾಗಿ ನಡೆಸಲಾಗಿದೆ. ಕ್ಷಿಪಣಿಯ ಕಾರ್ಯ ಸನ್ನದ್ಧತೆಯನ್ನು ಪರೀಕ್ಷಿಸಲು ಭಾರತೀಯ ಸೇನೆಯ ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡ್(ಎಸ್‌ಎಫ್‌ಸಿ)ನ ನಿಯತಕಾಲಿಕ ತರಬೇತಿ ಚಟುವಟಿಕೆಯ ಅಂಗವಾಗಿ ಈ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ಇದು ಅಗ್ನಿ-1ರ 18ನೇ ಆವೃತ್ತಿಯಾಗಿದ್ದು, ಪ್ರಯೋಗವು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದರು.
700 ಕಿ.ಮೀ.ಗೂ ಅಧಿಕ ದಾಳಿ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-1 ಭೂಮಿಯಿಂದ ಭೂಮಿಗೆ ಉಡಾಯಿಸುವ, ಏಕಹಂತದ ಕ್ಷಿಪಣಿಯಾಗಿದ್ದು, 2004ರಲ್ಲಿ ಸೇನೆಗೆ ಸೇರ್ಪಡೆಗೊಂಡಿತ್ತು. ಅದು ಘನ ರಾಕೆಟ್ ಇಂಧನ ಚಾಲಿತ ವ್ಯವಸ್ಥೆಯನ್ನು ಹೊಂದಿದೆ. ಗುರಿಯ ಮೇಲೆ ಕರಾರುವಕ್ಕಾಗಿ ಎರಗಲು ನೆರವಾಗಬಲ್ಲ ವಿಶೇಷ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ.
12 ಟನ್ ತೂಕ, 15 ಮೀ.ಉದ್ದವಿರುವ ಈ ಕ್ಷಿಪಣಿಯು 1,000 ಕೆ.ಜಿ.ತೂಕದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ಅಡ್ವಾನ್ಸಡ್ ಸಿಸ್ಟಮ್ಸ್ ಲ್ಯಾಬೊರೇಟರಿಯು ಡಿಆರ್‌ಡಿಎಲ್ ಮತ್ತು ಆರ್‌ಸಿಐಗಳ ಸಹಯೋಗದೊಂದಿಗೆ ಅಗ್ನಿ-1 ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಿದೆ. ಕ್ಷಿಪಣಿಯ ಈ ಹಿಂದಿನ ಯಶಸ್ವಿ ಪ್ರಯೋಗ ವನ್ನು 2016, ನ.22ರಂದು ಇದೇ ತಾಣದಿಂದ ನಡೆಸಲಾಗಿತ್ತು.







