ಕುವೆಂಪು ಸಾಹಿತ್ಯ ಅತ್ಯುತ್ತಮ ಅಸ್ತ್ರ: ಡಾ.ವೂಡೇ ಪಿ.ಕೃಷ್ಣ
ಬೆಂಗಳೂರು, ಫೆ.6: ಸಾಂಸ್ಕೃತಿಕ ದಬ್ಬಾಳಿಕೆಯ ಕಾಲಘಟ್ಟದಲ್ಲಿ ನಿರ್ಭೀತಿಯಿಂದ ಜೀವನ ಸಾಗಿಸಬೇಕಾದರೆ ಕುವೆಂಪು ಸಾಹಿತ್ಯ ಅತ್ಯುತ್ತಮ ಅಸ್ತ್ರವಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ, ಶಿಕ್ಷಣ ತಜ್ಞ ಡಾ.ವೂಡೇ ಪಿ.ಕೃಷ್ಣ ಹೇಳಿದ್ದಾರೆ.
ಮಂಗಳವಾರ ನಗರದ ಶೇಷಾದ್ರಿಪುರ ಪ್ರೌಢಶಾಲೆಯಲ್ಲಿ ಅನಕೃ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 114ನೇ ಜನ್ಮದಿನ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಬಳಿಕ ಭಾರತೀಯ ಸಂಸ್ಕೃತಿಯ ಪುನರುಜ್ಜೀವನವನ್ನು ರಾಷ್ಟ್ರಕವಿ ಕುವೆಂಪು ಮೂಲಕ ದಾಖಲಿಸಬಹುದು. ಪ್ರಸಕ್ತ ಕಾಲಘಟ್ಟದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ದಬ್ಬಾಳಿಕೆ ವಿರುದ್ಧ ಅವರ ಸಾಹಿತ್ಯವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಬೇಕಿದೆ ಎಂದು ಹೇಳಿದರು.
ಕುವೆಂಪು ಕನ್ನಡ ಟಾಗೂರ್. ಅವರು ಬರವಣಿಗೆಯ ಮೂಲಕ ಸಾಮಾಜಿಕ ಪಿಡುಗುಗಳಾದ ಅಸ್ಪಶ್ಯತೆ, ಮೌಢ್ಯಗಳ ವಿರುದ್ಧ ಹೋರಾಟ ನಡೆಸಿದರು. ಶೂದ್ರರ ಸಂಕೀರ್ಣ ಬದುಕಿನ ಚಿಂತನೆಗೆ ಕುವೆಂಪು ಸಾಹಿತ್ಯ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ನಮ್ಮಲ್ಲಿನ ಪರಭಾಷಾ ದಾಸ್ಯತನ ಹೋಗಬೇಕಾದರೆ ಮಾತೃಭಾಷೆಯನ್ನು ಪ್ರೀತಿಸಬೇಕು. ಇದರಿಂದ ಮಾತ್ರ ಸ್ವಾಭಿಮಾನ ಬರಲು ಸಾಧ್ಯ. ಕುವೆಂಪು ಅವರಲ್ಲಿ ಕನ್ನಡತನ ಜಾಗೃತಗೊಳ್ಳದಿದ್ದರೆ ಕನ್ನಡ ಸಾಹಿತ್ಯದ ಸ್ಥಿತಿ ಊಹಿಸಲೂ ಅಸಾಧ್ಯವಾಗುತ್ತಿತ್ತು. ಕುವೆಂಪು ಕನ್ನಡದ ಆಸ್ತಿ. ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಅವರನ್ನು ಸ್ಮರಿಸಬೇಕಿದೆ ಎಂದು ಕರೆ ನೀಡಿದರು.
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಕೊನೆಯಿಲ್ಲದ ಈಜು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕುವೆಂಪು ವಿಚಾರಧಾರೆಗಳ ಬಗ್ಗೆ ಶಾಲಾ ಮಕ್ಕಳಿಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿ, ಸರಿ ಉತ್ತರ ನೀಡಿದ ಮಕ್ಕಳಿಗೆ ಕುವೆಂಪುರವರ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ರಾಣಿ ಗೋವಿಂದರಾಜು, ಉಪನ್ಯಾಸಕ ಡಾ.ಬಿ.ಎಸ್.ಅಶೋಕ್‌ಕುಮಾರ್ ಅನಕೃ ಕನ್ನಡ ಸಂಘದ ಅಧ್ಯಕ್ಷ ರು.ಬಸಪ್ಪ ಸೇರಿದಂತೆ ಮತ್ತಿತರರು ಇದ್ದರು.







