ಪ್ಲಾಸ್ಟಿಕ್, ಲ್ಯಾಮಿನೇಟ್ ಆಧಾರ್ ಕಾರ್ಡ್ ಬಳಸದಿರಿ: ಯುಐಡಿಎಐ ಎಚ್ಚರಿಕೆ

ಹೊಸದಿಲ್ಲಿ, ಫೆ. 6: ಪ್ಲಾಸ್ಟಿಕ್ ಅಥವಾ ಲ್ಯಾಮಿನೇಟೆಡ್ ಆಧಾರ್ ಕಾರ್ಡ್‌ಗಳನ್ನು ಬಳಸದಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಆಧಾರ್ ಕಾರ್ಡ್ ಅನ್ನು ಅನಧಿಕೃತವಾಗಿ ಮುದ್ರಿಸುವುದರಿಂದ ಕ್ಯೂಆರ್ ಕೋಡ್ ಕಾರ್ಯನಿರ್ವಹಿಸದು ಹಾಗೂ ವೈಯಕ್ತಿಕ ಡಾಟಾಗಳು ವ್ಯಕ್ತಿಯ ಅನುಮತಿ ಇಲ್ಲದೆ ಬಹಿರಂಗವಾಗಬಹುದು ಎಂದು ಅದು ಹೇಳಿದೆ.
ಆಧಾರ್ ಪತ್ರ, ಅದರ ಹೊರಭಾಗ, ಸಾಮಾನ್ಯ ಕಾಗದದ ಮೇಲೆ ಡೌನ್‌ಲೋಡ್ ಮಾಡಲಾದ ಆಧಾರ್ ಆವೃತ್ತಿ, ಎಂ ಆಧಾರ್ ಸಂಪೂರ್ಣ ಮೌಲ್ಯಯುತ ಎಂದು ಅದು ಹೇಳಿದೆ.
ಅಲ್ಲದೆ, ಅನಧಿಕೃತ ಆಧಾರ್ ಕಾರ್ಡ್ ಮುದ್ರಿಸಲು 50ರಿಂದ 300 ರೂ. ವರೆಗೆ ವೆಚ್ಚ ಬೀಳುತ್ತದೆ. ಕೆಲವೊಮ್ಮೆ ಇದು ಇನ್ನಷ್ಟು ಹೆಚ್ಚಬಹುದು. ಇದು ಸಂಪೂರ್ಣವಾಗಿ ಅನಗತ್ಯ ಎಂದು ಅದು ತಿಳಿಸಿದೆ.
ಕೆಲವು ಅಂಗಡಿಗಳಲ್ಲಿ ಮುದ್ರಿಸುವ ಪ್ಲಾಸ್ಟಿಕ್ ಅಥವಾ ಪಿವಿಸಿ ಆಧಾರ್ ಕಾರ್ಡ್‌ನ ಕ್ಯೂ ಆರ್ ಕೋಡ್ ಕಾರ್ಯ ನಿರ್ವಹಿಸದು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಹೇಳಿಕೆ ತಿಳಿಸಿದೆ.
ಇದಲ್ಲದೆ, ಸಂಬಂಧಿತರಿಗೆ ಮಾಹಿತಿ ನೀಡದೆ ಆಧಾರ್ ಕಾರ್ಡ್‌ನ ಮಾಹಿತಿಗಳು ಹಂಚಿಕೆಯಾಗುವ ಸಾಧ್ಯತೆ ಇರುತ್ತದೆ ಎಂದು ಅದು ಹೇಳಿದೆ.
ಪ್ಲಾಸ್ಟಿಕ್ ಆಧಾರ್ ಕಾರ್ಡ್ ಸಂಪೂರ್ಣವಾಗಿ ಅನಗತ್ಯ ಹಾಗೂ ನಿರುಪಯುಕ್ತ. ಸಾಮಾನ್ಯ ಕಾಗದದ ಮೇಲೆ ಮುದ್ರಿಸಲಾದ ಆಧಾರ್ ಕಾರ್ಡ್ ಹಾಗೂ ಇ ಆಧಾರ್ ಕಾರ್ಡ್ ಎಲ್ಲ ರೀತಿಯಿಂದಲೂ ಮೌಲ್ಯಯುತ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.







