ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1074 ಮಂದಿಗೆ ಹಕ್ಕುಪತ್ರ ವಿತರಣೆ
ಉಡುಪಿ, ಫೆ.6: ಕಾನೂನಿನಲ್ಲಿ ತೊಡಕಿಲ್ಲದೆ ಇರುವ ಅಕ್ರಮವಾಗಿ ಮನೆ ಕಟ್ಟಿರುವವರಿಗೆ 94 ಸಿಯಲ್ಲಿ 567, 94ಸಿಸಿಯಲ್ಲಿ 462 ಹಾಗೂ 53ರನ್ವಯ 45 ಹೀಗೆ ಒಟ್ಟು 1074ಕ್ಕಿಂತ ಹೆಚ್ಚು ಅಕ್ರಮವಾಗಿ ನೆಲೆಸಿರುವವರಿಗೆ ಹಕ್ಕುಪತ್ರ ಗಳನ್ನು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ವಿತರಿಸ ಲಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಬಿಜೆಪಿ ನೀಡಿದ ಹೇಳಿಕೆಯನ್ನು ಟೀಕಿಸಿದ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಸಚಿವರ ನಡೆಯಿಂದ ಅಸೂಯೆಗೊಂಡ ಬಿಜೆಪಿಯವರು ಮುಗ್ದ ಜನರನ್ನು ದಾರಿ ತಪ್ಪಿಸಲು ಇಂಥ ತಂತ್ರ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 5 ವರ್ಷ ಪೂರ್ತಿಯಾದರೂ, ಬಡವರಿಗೆ ಹಕ್ಕುಪತ್ರ ನೀಡುವ ಕೆಲಸ ಸರಕಾರದಿಂದ ಆಗಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಧಿಕಾರದಲ್ಲಿರುವಾಗ 8 ವರ್ಷಗಳಲ್ಲಿ ಡೀಮ್ಡ್ ಪಾರೆಸ್ಟ್ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುತಿದ್ದ ಎಷ್ಟು ಜನರಿಗೆ ಹಕ್ಕುಪತ್ರ ನೀಡಿದ್ದಾರೆ ಎಂದು ಮೊದಲು ಉತ್ತರಿಸಲಿ ಎಂದು ಸವಾಲೆಸೆದರು.
ಡೀಮ್ಡ್ ಪಾರೆಸ್ಟ್ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ ಬಡವರಿಗೆ ಹಕ್ಕುಪತ್ರ ಕೊಡಲು ಕೇಂದ್ರ ಸರಕಾರ ರಚಿಸಿದ ಕಾನೂನೇ ತೊಡಕಾಗಿ ಪರಿಣ ಮಿಸಿದೆ. ಇದರ ಲಕ್ಷಾಂತರ ಎಕರೆ ಸ್ವಾಧೀನಪಡಿಸಿಕೊಳ್ಳಲು ಬಹಳಷ್ಟು ಸಮಯ ಬೇಕಾಗುತ್ತದೆ.ಈಗಾಗಲೇ ಗೋಮಾಳ ಗೋಚರಾವು, ಪರಂಬೋಕು ಜಾಗಗಳಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡಲು ಕಾನೂನಿನಲ್ಲಿ ತೊಡಕಿರುವುದರಿಂದ ಕಾನೂನಿನಲ್ಲಿ ಮಾರ್ಪಡಿಸಿ ಹಕ್ಕುಪತ್ರ ಪತ್ರ ನೀಡುವ ಎಲ್ಲಾ ಕ್ರಮವನ್ನು ರಾಜ್ಯ ಸರಕಾರ ಕೈಗೊಳ್ಳುತ್ತಿದೆ. ಈ ಬಗ್ಗೆ ಸಚಿವ ಪ್ರಮೋದ್ ಮಧ್ವರಾಜ್ ಅಧಿಕಾರಿಗಳ ಸಭೆ ಕರೆದು ಫೆಬ್ರವರಿ ಕೊನೆಯೊಳಗೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.







