1000 ವಿದ್ಯಾರ್ಥಿಗಳಿಗೆ ಮದ್ರಸ ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ ?
ಉ.ಪ್ರದೇಶ : ಆಧಾರ್ ಇಲ್ಲದ ಕಾರಣ

ಲಕ್ನೊ, ಫೆ.6: ಉತ್ತರಪ್ರದೇಶದ ಮದ್ರಸಗಳಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಸುಮಾರು 1,000ದಷ್ಟು ನೇಪಾಳಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಹೊಂದಿರದ ಕಾರಣ ಮದ್ರಸ ಮಂಡಳಿ ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರಪ್ರದೇಶ ಮದ್ರಸ ಶಿಕ್ಷಣ ಮಂಡಳಿ(ಯುಪಿಎಂಇಬಿ) ನಡೆಸುವ ಪರೀಕ್ಷೆ ಬರೆಯಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ನೇಪಾಳಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಮದ್ರಸದ ಶಿಕ್ಷಕರು ಮದ್ರಸ ಶಿಕ್ಷಾ ಮಂಡಳಿಯ ಗಮನಕ್ಕೆ ತಂದಿದ್ದಾರೆ.
ಮದ್ರಸ ಪರೀಕ್ಷೆಯ ಅರ್ಜಿ ಫಾರಂಗಳನ್ನು ತುಂಬಿಸಿ ಸಲ್ಲಿಸಲಾಗಿದೆ. ಆದರೆ ಅರ್ಜಿಯಲ್ಲಿ ತಿಳಿಸಿರುವಂತೆ ಆಧಾರ್ ಕಾರ್ಡ್ ನಂಬರ್ ಕಡ್ಡಾಯಗೊಳಿಸಿರುವುದನ್ನು ರದ್ದುಗೊಳಿಸದಿದ್ದರೆ ನೇಪಾಳದ ಸುಮಾರು 1,000ದಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದು ಎಂದು ‘ಮದ್ರಸ ಅರೇಬಿಯಾ ಟೀಚರ್ಸ್ ಅಸೋಸಿಯೇಷನ್’ನ ಪ್ರಧಾನ ಕಾರ್ಯದರ್ಶಿ ದಿವಾನ್ ಸಾಹೆಬ್ ಜಮಾನ್ ಖಾನ್ ತಿಳಿಸಿದ್ದಾರೆ. ಜನ್ಮಪ್ರಮಾಣ ಪತ್ರ ಅಥವಾ ಪೌರತ್ವದ ಪ್ರಮಾಣಪತ್ರದ ಆಧಾರದಲ್ಲಿ ನೇಪಾಳಿ ಪ್ರಜೆಗಳಿಗೆ ಪ್ರವೇಶ ನೀಡಲಾಗುತ್ತದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಫೆ.10 ಅಂತಿಮ ದಿನವಾಗಿದ್ದು , ಆಧಾರ್ ವಿವರ ಸಲ್ಲಿಸದ ಹೊರತು ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಇಂತಹ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ. ಗಮನಕ್ಕೆ ಬಂದ ತಕ್ಷಣ ಕಾನೂನಿನ ಪ್ರಕಾರ ನಿರ್ಧಾರವೊಂದಕ್ಕೆ ಬರಲಾಗುವುದು ಎಂದು ಉಪಮುಖ್ಯಮಂತ್ರಿ ದಿನೇಶ್ ಶರ್ಮ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆಧಾರ್ ಕಾರ್ಡ್ ಹೊಂದಿರದ ನೇಪಾಳಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಇಂತಹ ಪ್ರಕರಣ ಸರಕಾರದ ಎದುರು ಬಂದರೆ ಆಗ ಸಭೆ ನಡೆಸಿ ಕಾನೂನಿನ ಪ್ರಕಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶರ್ಮ ಹೇಳಿದ್ದಾರೆ. ಸಮಸ್ಯೆಯ ಕುರಿತು ಸರಕಾರಕ್ಕೆ ಮಾಹಿತಿ ನೀಡಲಾಗಿದ್ದು, ಸರಕಾರದ ಸೂಚನೆಗೆ ಕಾಯಲಾಗುತ್ತಿದೆ ಎಂದು ಯುಪಿಎಂಇಬಿ ರಿಜಿಸ್ಟ್ರಾರ್ ರಾಹುಲ್ ಗುಪ್ತಾ ತಿಳಿಸಿದ್ದಾರೆ.







